HomeBelgaumಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ರಾಜಕೀಯ ಮೇಲಾಟ: ಜಾರಕಿಹೊಳಿ ಬಣದ ಲೆಕ್ಕಾಚಾರಕ್ಕೆ ಸವದಿ ಬ್ರೇಕ್

ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ರಾಜಕೀಯ ಮೇಲಾಟ: ಜಾರಕಿಹೊಳಿ ಬಣದ ಲೆಕ್ಕಾಚಾರಕ್ಕೆ ಸವದಿ ಬ್ರೇಕ್

ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್‌ನ ತೆರವಾದ ನಿರ್ದೇಶಕ ಸ್ಥಾನಕ್ಕೆ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಅಥಣಿ ಮೂಲದ ಮುತ್ತಣ್ಣ ಕಾತ್ರಾಳ ಅವರನ್ನು ನೇಮಕ ಮಾಡಲಾಗಿದೆ. ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಆಪ್ತರಾಗಿರುವ ಕಾತ್ರಾಳ ಅವರ ನೇಮಕ, ಡಿಸಿಸಿ ಬ್ಯಾಂಕ್‌ನಲ್ಲಿ ಜಾರಕಿಹೊಳಿ ಸಹೋದರರ ಬಣದ ರಾಜಕೀಯ ಲೆಕ್ಕಾಚಾರಕ್ಕೆ ತಿರುಗೇಟು ಎಂಬ ಚರ್ಚೆಗೆ ಕಾರಣವಾಗಿದೆ.

ಡಿಸಿಸಿ ಬ್ಯಾಂಕ್‌ನ ಖಾಲಿಯಾಗಿದ್ದ ನಿರ್ದೇಶಕ ಸ್ಥಾನಕ್ಕೆ ಕುರುಬ ಸಮುದಾಯದ ಮುಖಂಡರೊಬ್ಬರನ್ನು ನೇಮಕ ಮಾಡುವ ಉದ್ದೇಶವನ್ನು ಜಾರಕಿಹೊಳಿ ಸಹೋದರರು ಹೊಂದಿದ್ದರು ಎನ್ನಲಾಗಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದರಿಂದ ತೆರವಾದ ಸ್ಥಾನ ಯಾರ ಪಾಲಾಗಲಿದೆ ಎಂಬುದು ಸಹಕಾರ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿತ್ತು.

ಈ ಬೆಳವಣಿಗೆಯ ನಡುವೆಯೇ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಇಲಾಖಾ ವ್ಯಾಪ್ತಿಯ ಮೂಲಕ ಅಪೆಕ್ಸ್ ಬ್ಯಾಂಕ್‌ನ ಪ್ರತಿನಿಧಿಯಾಗಿ ಮುತ್ತಣ್ಣ ಕಾತ್ರಾಳ ಅವರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಸವದಿ ಅವರು ಸದ್ದಿಲ್ಲದೆ ನಡೆಸಿದ ಈ ರಾಜಕೀಯ ನಡೆ ಜಾರಕಿಹೊಳಿ ಬಣದ ಲೆಕ್ಕಾಚಾರವನ್ನು ಬದಲಿಸಿದೆ ಎನ್ನಲಾಗುತ್ತಿದೆ.

ಅಥಣಿ ಮೂಲದ ಮುತ್ತಣ್ಣ ಕಾತ್ರಾಳ ಅವರು ಕಳೆದ ಸುಮಾರು ಮೂರು ದಶಕಗಳಿಂದ ಲಕ್ಷ್ಮಣ ಸವದಿ ಅವರ ನಂಬಿಕಸ್ಥ ಹಾಗೂ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ. ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಡಿಸಿಸಿ ಬ್ಯಾಂಕ್‌ಗೆ ಪ್ರವೇಶ ಪಡೆದಿರುವುದು ಬೆಳಗಾವಿ ಜಿಲ್ಲೆಯ ಸಹಕಾರ ರಾಜಕಾರಣದಲ್ಲಿ ಸವದಿ ಅವರ ಪ್ರಭಾವಕ್ಕೆ ಮತ್ತೊಂದು ಉದಾಹರಣೆ ಎಂಬ ಮಾತುಗಳು ಕೇಳಿಬರುತ್ತಿವೆ.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ನೇಮಕದ ಮೂಲಕ ಸಹಕಾರ ಕ್ಷೇತ್ರದಲ್ಲಿ ತಮ್ಮ ಬಣದ ಹಿಡಿತವನ್ನು ಬಲಪಡಿಸುವಲ್ಲಿ ಸವದಿ ಯಶಸ್ವಿಯಾಗಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img