ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ಹೆಸರಿನಲ್ಲಿ ಆಯೋಜಿಸಲಾಗಿದ್ದ ಹೈಟೆಕ್ ಸ್ವಿಮ್ಮಿಂಗ್ ಪೂಲ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಈ ವೇಳೆ ಗಾಂಜಾ, ಎಂಡಿಎಂಎ, ವಿದೇಶಿ ಮದ್ಯ ಹಾಗೂ ನಿಷೇಧಿತ ಹುಕ್ಕಾಗಳು ಪತ್ತೆಯಾಗಿದ್ದು, ಮೂವರು ಆಯೋಜಕರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಮಾರತ್ತಹಳ್ಳಿ ಸಮೀಪದ ಕರಿಯಮ್ಮನ ಅಗ್ರಹಾರದಲ್ಲಿರುವ ವಿಲ್ಲಾವೊಂದರಲ್ಲಿ ಈ ಪಾರ್ಟಿ ನಡೆಯುತ್ತಿತ್ತು. ಹೈಟೆಕ್ ಸ್ವಿಮ್ಮಿಂಗ್ ಪೂಲ್ ವ್ಯವಸ್ಥೆ ಹೊಂದಿದ್ದ ವಿಲ್ಲಾದಲ್ಲಿ ಬಹುತೇಕ ರೇವ್ ಪಾರ್ಟಿಯ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಮಾದಕ ವಸ್ತುಗಳು ಸೇರಿದಂತೆ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ.
ರಾತ್ರಿ 9ರಿಂದ ಬೆಳಗಿನ ಜಾವ 5ರವರೆಗೆ ಪಾರ್ಟಿ!
ಈ ಪಾರ್ಟಿ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ನಡೆಯುತ್ತಿತ್ತು ಎನ್ನಲಾಗಿದೆ. ಕೇವಲ 50 ಜೋಡಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. FV Social 404 ಮತ್ತು Hopzyx ಆ್ಯಪ್ಗಳ ಮೂಲಕ ಪಾರ್ಟಿಗೆ ಆಹ್ವಾನ ಹಾಗೂ ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಪಾರ್ಟಿಯಲ್ಲಿ ಭಾಗವಹಿಸಲು ಪ್ರತ್ಯೇಕ ಪ್ರವೇಶ ಶುಲ್ಕವನ್ನೂ ನಿಗದಿಪಡಿಸಲಾಗಿತ್ತು. ಯುವಕರಿಗೆ 1,710 ರೂಪಾಯಿ, ಯುವತಿಯರಿಗೆ 1,080 ರೂಪಾಯಿ ಹಾಗೂ ಜೋಡಿಗಳಿಗೆ 2,400 ರೂಪಾಯಿ ಶುಲ್ಕ ವಿಧಿಸಲಾಗಿತ್ತು.
ಮೂವರು ಆಯೋಜಕರ ಬಂಧನ!
ಪಾರ್ಟಿ ಆಯೋಜಕರಾದ ಅರಿಹಂತ್ ಪಾಂಡೆ, ಅಭಿನವ್ ಪಾಂಡೆ ಮತ್ತು ಪಾರ್ಥ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ವಿಲ್ಲಾದಲ್ಲಿ ಪತ್ತೆಯಾದ ಮಾದಕ ವಸ್ತುಗಳು ಹಾಗೂ ಇತರ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪಾರ್ಟಿ ಆಯೋಜನೆ, ಮಾದಕ ವಸ್ತುಗಳ ಬಳಕೆ ಹಾಗೂ ಪೂರೈಕೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.










