ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾಸ್ಪತ್ರೆಯಲ್ಲಿನ ಅವಸ್ಥೆಯನ್ನು ಖಂಡಿಸಿ, ಲಕ್ಷೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಜನ-ಔಷಧಿ ಕೇಂದ್ರವನ್ನು ತೆರೆಯುವಂತೆ ನಮ್ಮ ಕರ್ನಾಟಕ ಸೇನೆ ಗದಗ ಜಿಲ್ಲಾ ಘಟಕದ ಗದಗ ಜಿಲ್ಲಾಧ್ಯಕ್ಷ ಭೀಮಣ್ಣ ಇಂಗಳೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಭೀಮಣ್ಣ ಇಂಗಳೆಯವರು ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸಾಕಷ್ಟು ತಾಲೂಕುಗಳಿಂದ ಬಡ ರೋಗಿಗಳು ಚಿಕಿತ್ಸೆಗೆಂದು ಬರುತ್ತಿದ್ದು, ಆಸ್ಪತ್ರೆಯಲ್ಲಿ ಸ್ವಚ್ಛತೆ ಹಾಗೂ ಔಷಧಿಗಳ ಕೊರತೆಯಿದೆ. ಗದಗ ಜಿಲ್ಲೆ ಲಕ್ಷೇಶ್ವರ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರ ಮುಚ್ಚಿದ್ದರೂ ಜಿಲ್ಲಾ ಆರೋಗ್ಯಾಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಈ ಎಲ್ಲ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಸಂಘಟನೆ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಮನವಿ ಮೂಲಕ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಈರಣ್ಣ ಮ್ಯಾಗೇರಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಜಗದೀಶ ಮಡಿವಾಳರ, ಶರಣಪ್ಪ ವಾಲ್ಮೀಕಿ, ವೀರೇಶ ಶಿವಶಿಂಪಗೇರಿ, ಮಾರುತಿ ಬರಗಿ, ಷಣ್ಮುಖ ಕಾತರಕಿ ಉಪಸ್ಥಿತರಿದ್ದರು.