ಬೆಳಗಾವಿ:- ಬೆಳಗಾವಿ ಜಿಲ್ಲೆ ವಿಭಜನೆಗೆ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ವಿಭಜನೆಗೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದೇವೆ. ಗೋಕಾಕ್ ಹಾಗೂ ಚಿಕ್ಕೋಡಿ ಜಿಲ್ಲೆ ಆಗಬೇಕೆಂದು ಒತ್ತಾಯಿಸಿದ್ದೇವೆ. ಸಿಎಂ ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಪರಿಷತ್ ಸದಸ್ಯರ ಸಭೆ ಕರೆಯಲಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದ ಬಳಿಕ ಅಂತಿಮ ತೀರ್ಮಾನ ಮಾಡುವ ಭರವಸೆ ನೀಡಿದ್ದಾರೆ. ಶಾಸಕರ ಸಭೆ ಕರೆದಿದ್ದು ಇದೇ ಮೊದಲು. ಅಧಿವೇಶನದಲ್ಲಿ ಶಾಸಕರ ಸಭೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಅಥಣಿ ಹಾಗೂ ಬೈಲಹೊಂಗಲ ಜಿಲ್ಲೆ ಆಗುವುದಕ್ಕೂ ಬೇಡಿಕೆಯಿದೆ. ಆದ್ರೆ ಅದು ಕಷ್ಟದ ಕೆಲಸ. ಈ ಹಿಂದೆ ಗೋಕಾಕ್ ಹಾಗೂ ಚಿಕ್ಕೋಡಿ ಜಿಲ್ಲೆ ಆಗಬೇಕು ಎಂದು ಶಿಫಾರಸು ಮಾಡಲಾಗಿದೆ. ಆದಷ್ಟು ಬೇಗ ಜಿಲ್ಲೆ ವಿಭಜನೆ ಆಗುವುದು ಒಳ್ಳೆಯದು ಎಂದಿದ್ದಾರೆ.
ಇನ್ನೂ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಪ್ರತಿಭಟನೆ ಮಾಡಿದರೇ ಒಳ್ಳೆಯದು. ಆದ್ರೆ ರೈತರ ಪರ ಮಾಡಲಿ ರಾಜಕೀಯ ಮಿಶ್ರಣ ಬೇಡ. ನ್ಯಾಯ ಸಮ್ಮತವಾದ ಪ್ರತಿಭಟನೆ ಮಾಡಿದ್ರೆ, ಅದಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ಕೇಂದ್ರ ಸರ್ಕಾರದ ಪಾತ್ರ ಬಹಳ ಇದೆ ಬಿಜೆಪಿ ಅವರು ಕೂಡ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದಿದ್ದಾರೆ.



