ನವದೆಹಲಿ: ದೇಶದ ವಾಹನ ಸವಾರರಿಗೆ ಮತ್ತೆ ತೈಲ ಬೆಲೆ ಏರಿಕೆಯ ಶಾಕ್ ಎದುರಾಗಿದೆ.
ಕೇಂದ್ರ ಸರ್ಕಾರವು ಸೋಮವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿದ್ದು, ಇಂಧನ ದರಗಳು ಗಗನಕ್ಕೇರಿವೆ.
ಹೊಸ ಪರಿಷ್ಕರಣೆಯ ಪ್ರಕಾರ ಪೆಟ್ರೋಲ್ ಪ್ರತಿ ಲೀಟರ್‌ಗೆ ₹2.61 ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ ₹2.71 ಏರಿಕೆ ಮಾಡಲಾಗಿದೆ. ಕಳೆದ 10 ದಿನಗಳಲ್ಲಿ ಇದು ನಾಲ್ಕನೇ ಬಾರಿಗೆ ನಡೆದ ಬೆಲೆ ಏರಿಕೆಯಾಗಿದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಈಗ ಲೀಟರ್‌ಗೆ ₹110.89 ಹಾಗೂ ಡೀಸೆಲ್ ದರ ₹98.80ಕ್ಕೆ ತಲುಪಿದೆ. ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿಯೂ ದರ ಹೆಚ್ಚಳವಾಗುತ್ತಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.
ಮೇ 15ರಂದು ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸುಮಾರು ₹3ರಷ್ಟು ಏರಿಸಲಾಗಿತ್ತು. ನಂತರ ಮೇ 23ರಂದು ಮತ್ತೆ ಏರಿಕೆ ಮಾಡಲಾಗಿದ್ದು, ಇದೀಗ ಮೂರನೇ ಹಂತದಲ್ಲಿ ಮತ್ತಷ್ಟು ಹೆಚ್ಚಳ ಮಾಡಲಾಗಿದೆ. ಎರಡೇ ವಾರದಲ್ಲಿ ನಾಲ್ಕು ಬಾರಿ ತೈಲ ದರ ಏರಿಕೆಯಾಗಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
“ಪದೇ ಪದೇ ದರ ಏರಿಸಿದರೆ ಹೇಗೆ?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ತೈಲ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



