ಬೆಂಗಳೂರು: ಪಂಚ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದಿರುವ ರಾಜ್ಯ ಸರ್ಕಾರ ಇದೀಗ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆಗೆ ಮುಂದಾಗಿದೆ.
ನಿನ್ನೆ ನಡೆದ ಶಾಸಕರು ಹಾಗೂ ಹಿರಿಯ ನಾಯಕರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಸುಮಾರು 1 ಕೋಟಿ 64 ಲಕ್ಷ ಮಹಿಳೆಯರು ಪ್ರತಿತಿಂಗಳು ₹2,000 ಸಹಾಯಧನ ಪಡೆಯುತ್ತಿದ್ದು, ಗೃಹಜ್ಯೋತಿ ಯೋಜನೆಯಡಿ 1 ಕೋಟಿ 67 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದಾರೆ.
ಆದರೆ, ಎರಡೂ ಯೋಜನೆಗಳಲ್ಲಿ ಅರ್ಹತೆ ಮೀರಿದವರು ಸೌಲಭ್ಯ ಪಡೆಯುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ಮಾಹಿತಿ ಬಂದಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತಪಟ್ಟವರ ಹೆಸರಿನಲ್ಲಿಯೂ ಹಣ ಜಮಾ ಆಗುತ್ತಿರುವ ಪ್ರಕರಣಗಳು ವರದಿಯಾಗಿವೆ ಎನ್ನಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಲ್ಲಿಯೂ ಅನರ್ಹರು ಫಲಾನುಭವಿಗಳಾಗಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.
ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸಿ, ಅರ್ಹರಿಗೆ ಮಾತ್ರ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಶೀಘ್ರದಲ್ಲೇ ಹೊಸ ಮಾರ್ಗಸೂಚಿಗಳು ಪ್ರಕಟವಾಗುವ ಸಾಧ್ಯತೆ ಇದೆ.
ಇತ್ತೀಚೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಗೃಹಲಕ್ಷ್ಮಿ ಯೋಜನೆಯಲ್ಲಿ ₹5,000 ಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿದ್ದರು. ಈ ಆರೋಪದ ಬೆನ್ನಲ್ಲೇ ಸರ್ಕಾರ ಯೋಜನೆಗಳ ಪರಿಷ್ಕರಣೆಗೆ ಮುಂದಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.



