ಬೆಂಗಳೂರು: ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯದಲ್ಲಿ ಬರೋಬ್ಬರಿ 62 ಸಾವಿರ ಕೋಟಿ ರೂಪಾಯಿಗೂ ಅಧಿಕ ಕೃಷಿ ನಷ್ಟ ಸಂಭವಿಸಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ 20,585 ಕೋಟಿ ರೂಪಾಯಿ ನೆರವು ನೀಡುವಂತೆ ಮನವಿ ಮಾಡಲಾಗಿದೆ.
ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರ ಬದುಕಿನ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ, 2026ರ ನೈಋತ್ಯ ಮುಂಗಾರು ಅವಧಿಯಲ್ಲಿ ಶೇಕಡಾ 35ರಷ್ಟು ಮಳೆ ಕೊರತೆಯಾಗಿದೆ. ವಾಡಿಕೆಯಂತೆ 852 ಮಿಲಿಮೀಟರ್ ಮಳೆಯಾಗಬೇಕಿದ್ದರೆ, ಕೇವಲ 551 ಮಿಲಿಮೀಟರ್ ಮಳೆಯಾಗಿದೆ.
ಈ ಮಳೆ ಕೊರತೆಯಿಂದಾಗಿ ರಾಜ್ಯದ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬರೋಬ್ಬರಿ 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 53.92 ಲಕ್ಷ ಹೆಕ್ಟೇರ್ ಕೃಷಿ ಬೆಳೆಗಳು ಹಾಗೂ 4.01 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಸೇರಿವೆ.
ಇನ್ನು ಬರದಿಂದ ಉಂಟಾಗಿರುವ ಒಟ್ಟು ಆರ್ಥಿಕ ನಷ್ಟ ಬರೋಬ್ಬರಿ 62,481 ಕೋಟಿ ರೂಪಾಯಿಗೂ ಅಧಿಕ ಎಂದು ರಾಜ್ಯ ಸರ್ಕಾರ ಲೆಕ್ಕಹಾಕಿದೆ. ಹೀಗಾಗಿ ಕೇಂದ್ರ ಸರ್ಕಾರ ತಕ್ಷಣವೇ ಆರ್ಥಿಕ ನೆರವು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಬರ ಪರಿಹಾರಕ್ಕಾಗಿ 20,585.73 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.
ರಾಜ್ಯ ಸರ್ಕಾರ ಕೇಳಿರುವ ಒಟ್ಟು ಪರಿಹಾರದಲ್ಲಿ ಬೆಳೆ ಹಾನಿಗೆ 6,128 ಕೋಟಿ ರೂಪಾಯಿಗೂ ಅಧಿಕ ನೆರವು ಕೋರಲಾಗಿದೆ. ಸಣ್ಣ ಮತ್ತು ಅತಿಸಣ್ಣ ರೈತರ ಜೀವನೋಪಾಯಕ್ಕಾಗಿ 12,146 ಕೋಟಿ ರೂಪಾಯಿ, ಕುಡಿಯುವ ನೀರಿನ ವ್ಯವಸ್ಥೆಗೆ 1,727 ಕೋಟಿ ರೂಪಾಯಿ ಹಾಗೂ ಜಾನುವಾರುಗಳ ಸಂರಕ್ಷಣೆಗೆ 583 ಕೋಟಿ ರೂಪಾಯಿ ನೆರವು ಕೇಳಲಾಗಿದೆ.
ವಿಶೇಷವಾಗಿ ರಾಜ್ಯದ 61.91 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಜೀವನೋಪಾಯ ಪರಿಹಾರ ಒದಗಿಸುವ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ. ಪ್ರತಿ ರೈತರಿಗೆ ದಿನಕ್ಕೆ 327 ರೂಪಾಯಿಯಂತೆ 60 ದಿನಗಳ ಅವಧಿಗೆ ಪರಿಹಾರ ಲೆಕ್ಕಹಾಕಲಾಗಿದೆ.
ಇನ್ನೊಂದೆಡೆ ಬರದಿಂದ ಜಾನುವಾರುಗಳಿಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ 476 ಗೋಶಾಲೆಗಳು ಹಾಗೂ 583 ಮೇವು ಬ್ಯಾಂಕ್ಗಳನ್ನು ಸ್ಥಾಪಿಸಲು ಕೇಂದ್ರದ ನೆರವು ಅಗತ್ಯವಿದೆ ಎಂದು ಮನವಿ ಮಾಡಲಾಗಿದೆ.
ಇಷ್ಟೇ ಅಲ್ಲ… ಬೆಳೆ ಹಾನಿ ಪರಿಹಾರ ಲೆಕ್ಕಾಚಾರಕ್ಕೆ ಈಗಲೂ 2015–16ರ ಹಳೆಯ ಕೃಷಿ ಗಣತಿಯ ದತ್ತಾಂಶ ಬಳಸುತ್ತಿರುವುದರಿಂದ ಕರ್ನಾಟಕಕ್ಕೆ ಸುಮಾರು 1,669 ಕೋಟಿ ರೂಪಾಯಿ ನೆರವಿನ ಕೊರತೆಯಾಗಬಹುದು ಎಂದು ರಾಜ್ಯ ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಹೀಗಾಗಿ ರಾಜ್ಯದ ನವೀಕೃತ ‘ಫ್ರೂಟ್ಸ್’ ದತ್ತಾಂಶವನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ.
ಬರಪೀಡಿತ ತಾಲೂಕುಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಪೌಷ್ಟಿಕ ಆಹಾರ ಒದಗಿಸಲು ಪಿಎಂ ಪೋಷಣ್ ಯೋಜನೆಯಡಿ ಹೆಚ್ಚುವರಿಯಾಗಿ 427 ಕೋಟಿ ರೂಪಾಯಿ ಹಾಗೂ ದುರ್ಬಲ ವರ್ಗದವರಿಗೆ ಪೌಷ್ಟಿಕಾಂಶ ಒದಗಿಸಲು ಸುಮಾರು 71 ಕೋಟಿ ರೂಪಾಯಿ ನೆರವನ್ನೂ ಕೋರಲಾಗಿದೆ.
ಇನ್ನು ಕೇಂದ್ರದ ಅಂತರ ಸಚಿವಾಲಯಗಳ ಅಧ್ಯಯನ ತಂಡ ಅಕ್ಟೋಬರ್ 3ರಿಂದ 6ರವರೆಗೆ ಕರ್ನಾಟಕಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದೆ ಎಂದು ತಿಳಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಸಲ್ಲಿಸಿರುವ ಸಮಗ್ರ ಬರ ಪರಿಹಾರ ಮನವಿಯನ್ನು ತ್ವರಿತವಾಗಿ ಪರಿಶೀಲಿಸಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.










