ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: “ಆದಿಕವಿ ಪಂಪನ ನಾಡಾದ ಪುಲಿಗೆರೆ, ಇಂದಿನ ಲಕ್ಷ್ಮೇಶ್ವರ, 6-7ನೇ ಶತಮಾನದಲ್ಲೇ ಕನ್ನಡ ಸಾಹಿತ್ಯದ ರಾಜಧಾನಿಯಾಗಿ ಗುರುತಿಸಿಕೊಂಡಿತ್ತು. ಹಳಗನ್ನಡ ಸಾಹಿತ್ಯದ ಘಟಿಕಾಸ್ಥಾನವಾಗಿ ಈ ನೆಲ ಕನ್ನಡ ಸಂಸ್ಕೃತಿ, ಸಾಹಿತ್ಯ ಮತ್ತು ಇತಿಹಾಸದ ವೈಭವವನ್ನು ಜಗತ್ತಿಗೆ ಪರಿಚಯಿಸಿದೆ” ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ರಾಜ್ಯಾಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಹೇಳಿದರು.
ಪಟ್ಟಣದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಬುಧವಾರ ನಡೆದ ‘ಪುಲಿಗೆರೆ ಪರಿಸರದ ಪ್ರಾಚೀನ ಕನ್ನಡ ಸಾಹಿತ್ಯ’ ಕುರಿತ ಮೂರು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ, ಮೈಸೂರಿನ ಮಾನಸಗಂಗೋತ್ರಿ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪುಲಿಗೆರೆ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ನೆಲವಾಗಿದ್ದು, ಸಂಶೋಧನಾ ಲಿಪಿಗಳ ಕೇಂದ್ರವಾಗಿಯೂ ಮಹತ್ವ ಪಡೆದಿದೆ ಎಂದು ಹೇಳಿದರು.
ಪುಲಿಗೆರೆಯ ಶಾಸನಗಳು, ಸಾಹಿತ್ಯ, ಶಿಲ್ಪಕಲೆ, ನಾಟಕ ಹಾಗೂ ಸಂಗೀತ ಕ್ಷೇತ್ರಗಳ ಕುರಿತು ಇನ್ನಷ್ಟು ಆಳವಾದ ಸಂಶೋಧನೆ ನಡೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆದಿಕವಿ ಪಂಪನ ಸಾಹಿತ್ಯ ಕ್ಷೇತ್ರವೇ ಪುಲಿಗೆರೆ ಎಂಬುದನ್ನು ಬ್ರಿಟಿಷ್ ಸಂಶೋಧಕ ಬಿ.ಎಲ್. ರೈಸ್ ಸಾಕ್ಷೀಕರಿಸಿದ್ದಾರೆ. ಹರಿಹರ, ರಾಘವಾಂಕ, ಪಾಲ್ಕುರಿಕೆ ಸೋಮನಾಥ ಹಾಗೂ ಆದಯ್ಯ ಕವಿಗಳು ಇಲ್ಲಿನ ಸೋಮೇಶ್ವರ ದೇವಸ್ಥಾನದಿಂದ ಸ್ಫೂರ್ತಿ ಪಡೆದಿದ್ದರು ಎಂದು ತಿಳಿಸಿದರು.
“ದೇಶದ ಯಾವುದೇ ಭಾಗದಲ್ಲಿ ಕಾಣದಂತಹ ನಂದಿಯ ಮೇಲೆ ಸೋಮೇಶ್ವರ ಮತ್ತು ಪಾರ್ವತಿ ಮೂರ್ತಿಗಳು ಇಲ್ಲಿರುವುದು ಪುಲಿಗೆರೆಯ ಹೆಮ್ಮೆ. ಇಂತಹ ಮಹತ್ವದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಹೇಳಿದರು.
ಮೂರು ದಿನಗಳ ವಿಚಾರ ಸಂಕಿರಣದ ವಿಷಯಾಧಾರಿತ ಪುಸ್ತಕ ಪ್ರಕಟವಾಗಬೇಕು ಎಂದು ಸಲಹೆ ನೀಡಿದ ಅವರು, ತ್ರಿಭಾಷಾ ನೀತಿಯಿಂದ ಕನ್ನಡ ಭಾಷೆಗೆ ಆತಂಕ ಎದುರಾಗಿದೆ. ಮಾಧ್ಯಮಿಕ ಶಿಕ್ಷಣದವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತೀಯ ಭಾಷಾ ಸಂಸ್ಥಾನದ ಯೋಜನಾ ನಿರ್ದೇಶಕ ಡಾ. ನೀಲಗಿರಿ ತಳವಾರ, “ಪಂಪನಿಗೂ ಪುಲಿಗೆರಿಗೂ ಅವಿನಾಭಾವ ಸಂಬಂಧವಿದೆ. ಐತಿಹಾಸಿಕ ಸಾಹಿತ್ಯ ಪರಂಪರೆಯ ಈ ನೆಲದಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣಕ್ಕೆ ಎಲ್ಲರೂ ಬೆಂಬಲ ನೀಡಬೇಕು” ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಕನ್ನಡ ನಾಡು-ನುಡಿಗಾಗಿ ಪ್ರತಿಯೊಬ್ಬರೂ ಕೆಲಸ ಮಾಡಬೇಕು. ಪಟ್ಟಣದಲ್ಲಿ ನಿರ್ಮಾಣವಾಗಲಿರುವ ಕನ್ನಡ ಸಾಹಿತ್ಯ ಭವನಕ್ಕೆ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ವಹಿಸಿದ್ದರು. ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ವಿಶ್ರಾಂತ ಪ್ರಾಚಾರ್ಯ ಪ್ರೊ. ಶಿವಕುಮಾರ ಶಿಗ್ಲಿ, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಆರ್.ಬಿ. ಬನ್ನೂರ, ಪ್ರೊ. ಆರ್.ಎನ್. ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಪುಲಿಗೆರೆ ಮುನ್ನೂರು ಪ್ರಾಂತ್ಯಗಳ ರಾಜಧಾನಿಯಾಗಿತ್ತು. ಇಲ್ಲಿನ ಸೋಮೇಶ್ವರ ದೇವಸ್ಥಾನ ಹಾಗೂ ಶಂಖ ಬಸದಿಗಳಲ್ಲಿರುವ ನೂರಾರು ಶಾಸನಗಳು ಈ ನೆಲದ ಹಿರಿಮೆ-ಗರಿಮೆಗೆ ಸಾಕ್ಷಿಯಾಗಿವೆ”
ಡಾ. ಮನು ಬಳಿಗಾರ
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ರಾಜ್ಯಾಧ್ಯಕ್ಷ



