ಇಸ್ಲಾಮಾಬಾದ್/ನವದೆಹಲಿ: 2019ರ ಪುಲ್ವಾಮಾ ಉಗ್ರ ದಾಳಿಯ ಪ್ರಮುಖ ಸಂಚುಕೋರ ಹಾಗೂ ಅಲ್-ಬದರ್ ಉಗ್ರ ಸಂಘಟನೆಯ ಕಮಾಂಡರ್ ಹಮ್ಜಾ ಬುರ್ಹಾನ್ ಅಲಿಯಾಸ್ ‘ಡಾಕ್ಟರ್’ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. ಮುಜಾಫರಾಬಾದ್ನಲ್ಲಿದ್ದ ಆತನ ಕಚೇರಿಯೊಳಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಹಮ್ಜಾ ಮೇಲೆ ಏಕಾಏಕಿ ಗುಂಡಿನ ಮಳೆಗರೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಬಳಿಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಹಮ್ಜಾ ಬುರ್ಹಾನ್ನ ನಿಜವಾದ ಹೆಸರು ಅರ್ಜುಮಂಡ್ ಗುಲ್ಜಾರ್ ದಾರ್. ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರತ್ನಿಪೋರಾ ಮೂಲದ ಈತ, ಹಲವು ವರ್ಷಗಳ ಹಿಂದೆ ಗಡಿ ದಾಟಿ ಪಾಕಿಸ್ತಾನ ಸೇರಿಕೊಂಡಿದ್ದನು. ಬಳಿಕ ಪಾಕಿಸ್ತಾನ ಬೆಂಬಲಿತ ಅಲ್-ಬದರ್ ಉಗ್ರ ಸಂಘಟನೆಯಲ್ಲಿ ಪ್ರಮುಖ ಕಮಾಂಡರ್ ಆಗಿ ಬೆಳೆದಿದ್ದ.
2019ರ ಫೆಬ್ರವರಿ 14ರಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್ಪಿಎಫ್ ಯೋಧರ ವಾಹನದ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಹಿಂದೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಭಾರತ ಆರೋಪಿಸಿತ್ತು. ಹಮ್ಜಾ ಬುರ್ಹಾನ್ ದಾಳಿಯ ಪ್ರಮುಖ ಓವರ್ ಗ್ರೌಂಡ್ ವರ್ಕರ್ ಆಗಿ ಕಾರ್ಯನಿರ್ವಹಿಸಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ದಕ್ಷಿಣ ಕಾಶ್ಮೀರದಲ್ಲಿ ಯುವಕರನ್ನು ಉಗ್ರ ಸಂಘಟನೆಗಳಿಗೆ ಸೇರ್ಪಡೆ ಮಾಡುವುದು, ಹಣಕಾಸು ನೆರವು ಒದಗಿಸುವುದು ಹಾಗೂ ಉಗ್ರ ಚಟುವಟಿಕೆಗಳಿಗೆ ಲಾಜಿಸ್ಟಿಕ್ ಬೆಂಬಲ ನೀಡುವುದು ಹಮ್ಜಾ ಪ್ರಮುಖ ಕೆಲಸವಾಗಿತ್ತು. ಈ ಹಿನ್ನೆಲೆ ಭಾರತ ಸರ್ಕಾರದ ಗೃಹ ಸಚಿವಾಲಯವು 2022ರಲ್ಲಿ ಯುಎಪಿಎ ಕಾಯ್ದೆಯಡಿ ಆತನನ್ನು ಅಧಿಕೃತವಾಗಿ ಭಯೋತ್ಪಾದಕ ಎಂದು ಘೋಷಿಸಿತ್ತು.
ಪುಲ್ವಾಮಾ ದಾಳಿಯ ಬಳಿಕ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ಉಗ್ರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇದೀಗ ಪಾಕಿಸ್ತಾನ ಮತ್ತು ಪಿಒಕೆ ಪ್ರದೇಶಗಳಲ್ಲಿ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಮೇಲೆ ನಡೆಯುತ್ತಿರುವ ಸರಣಿ ಟಾರ್ಗೆಟ್ ಕಿಲ್ಲಿಂಗ್ಗಳಲ್ಲಿ ಹಮ್ಜಾ ಬುರ್ಹಾನ್ ಹತ್ಯೆಯೂ ಪ್ರಮುಖ ಘಟನೆಯಾಗಿ ಗುರುತಿಸಲಾಗಿದೆ.



