ಬೆಂಗಳೂರು: ನಿರೀಕ್ಷೆಯಂತೆ ಅಬ್ಬರಿಸದ ಮುಂಗಾರಿನ ನಡುವೆ, ರಾಜ್ಯದಲ್ಲಿ ಮಳೆ ಮತ್ತಷ್ಟು ಕ್ಷೀಣಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ದಕ್ಷಿಣ ಮತ್ತು ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಾತ್ರ ಅಲ್ಲಲ್ಲಿ ಸಾಧಾರಣ ಅಥವಾ ಹಗುರ ಮಳೆಯಾಗುವ ನಿರೀಕ್ಷೆಯಿದ್ದು, ಉಳಿದೆಡೆ ಮಳೆ ಸಂಪೂರ್ಣ ಬಿಡುವು ನೀಡುವ ಸಾಧ್ಯತೆಯಿದೆ.
ಮಳೆಯ ಕೊರತೆಯ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಲಿದೆ. ಕಳೆದೊಂದು ವಾರದಿಂದ ಮಳೆ ಕಡಿಮೆಯಾಗಿರುವ ಕಾರಣ ಬಿಸಿಲಿನ ಧಗೆ ಹೆಚ್ಚಾಗುತ್ತಿದ್ದು, ವಾಡಿಕೆಗಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಏರಿಕೆಯಾಗುವ ಸಾಧ್ಯತೆಯಿದೆ. ಪರಿಣಾಮವಾಗಿ ಹಗಲು ವೇಳೆ ಬಿಸಿಲು ಚುರುಕಾಗಲಿದ್ದು, ಗರಿಷ್ಠ ತಾಪಮಾನ 30 ಡಿಗ್ರಿ ದಾಟುವ ಸಾಧ್ಯತೆಯಿದೆ. ಜೊತೆಗೆ ಕನಿಷ್ಠ ತಾಪಮಾನದಲ್ಲೂ ಏರಿಕೆಯಾಗುವುದರಿಂದ ರಾತ್ರಿ ವೇಳೆ ಸೆಕೆ ಹೆಚ್ಚಾಗಲಿದೆ ಎಂದು ಇಲಾಖೆ ಎಚ್ಚರಿಸಿದೆ.
ಮುಂದಿನ ಒಂದು ವಾರದ ಅವಧಿಯಲ್ಲಿ ರಾಜ್ಯದಾದ್ಯಂತ ಒಣಹವೆ ಮುಂದುವರಿಯಲಿದ್ದು, ತಾಪಮಾನ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತರು ಹಾಗೂ ಜನಸಾಮಾನ್ಯರಲ್ಲಿ ಆತಂಕ ಮನೆಮಾಡಿದೆ.



