ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಮತ್ತೊಮ್ಮೆ 30 ದಿನಗಳ ಪೆರೋಲ್ ಮಂಜೂರು ಮಾಡಲಾಗಿದೆ. ಸಾಧ್ವಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಮ್ ಸೋಮವಾರ ಬೆಳಗ್ಗೆ ಬಿಗಿ ಭದ್ರತೆಯ ನಡುವೆ ರೋಹ್ಟಕ್‌ನ ಸುನಾರಿಯಾ ಜೈಲಿನಿಂದ ಹೊರಬಂದು ಸಿರ್ಸಾ ಆಶ್ರಮಕ್ಕೆ ತೆರಳಿದ್ದಾರೆ.
ಈ ವರ್ಷ ಇದು ಅವರ ಎರಡನೇ ಪೆರೋಲ್ ಆಗಿದ್ದು, ಶಿಕ್ಷಾ ಅವಧಿಯಲ್ಲಿ ಒಟ್ಟು 16ನೇ ಬಾರಿ ಜೈಲು ಹೊರಗೆ ಬಂದಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, 3,193 ದಿನಗಳ ಶಿಕ್ಷಾ ಅವಧಿಯಲ್ಲಿ ರಾಮ್ ರಹೀಮ್ ಈಗಾಗಲೇ 406 ದಿನಗಳನ್ನು ಜೈಲು ಹೊರಗೇ ಕಳೆದಿದ್ದಾರೆ ಎಂಬ ಮಾಹಿತಿ ಭಾರೀ ಚರ್ಚೆಗೆ ಕಾರಣವಾಗಿದೆ.
2017ರಲ್ಲಿ ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ರಾಮ್ ರಹೀಮ್‌ಗೆ 20 ವರ್ಷಗಳ ಶಿಕ್ಷೆ ವಿಧಿಸಿತ್ತು. ಬಳಿಕ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣ ಮತ್ತು ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಕೊಲೆ ಸಂಚು ಪ್ರಕರಣದಲ್ಲೂ ಆತ ದೋಷಿ ಎಂದು ಘೋಷಿಸಲ್ಪಟ್ಟಿದ್ದ.
ಆದರೆ ನಂತರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕೆಲ ಪ್ರಕರಣಗಳಲ್ಲಿ ರಾಮ್ ರಹೀಮ್‌ಗೆ ರಿಲೀಫ್ ನೀಡಿತ್ತು. ಇದೀಗ ಹರಿಯಾಣ ಉತ್ತಮ ನಡವಳಿಕೆ ಕೈದಿಗಳ ತಾತ್ಕಾಲಿಕ ಬಿಡುಗಡೆ ಕಾಯ್ದೆಯಡಿ ಮತ್ತೆ ಪೆರೋಲ್ ಸಿಕ್ಕಿದ್ದು, ಈ ನಿರ್ಧಾರ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.



