ಗದಗ: ಸುಮಾರು ಎರಡು ವರ್ಷಗಳಿಂದ ಕುಟುಂಬಸ್ಥರಿಂದ ದೂರವಾಗಿದ್ದ ಶಿರಹಟ್ಟಿ ತಾಲೂಕಿನ ಕಲ್ಲಾಗನೂರ ಗ್ರಾಮದ 55 ವರ್ಷದ ರಾಮಣ್ಣ ತಂದೆ ಅಜ್ಜಪ್ಪ ಗಂಗಣ್ಣವರ ಇದೀಗ ಮತ್ತೆ ಕುಟುಂಬದ ಮಡಿಲು ಸೇರಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ರಾಮಣ್ಣ ಅವರನ್ನು ಗದಗ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸುರಕ್ಷಿತವಾಗಿ ಜಿಲ್ಲೆಗೆ ಕರೆತಂದು ಕುಟುಂಬಸ್ಥರೊಂದಿಗೆ ಸೇರಿಸಿದ್ದಾರೆ.
ರಾಮಣ್ಣ ಅವರು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಇರುವ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 16ರಂದು ಶಿರಹಟ್ಟಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸ್ಥಳೀಯವಾಗಿ ಹೊಳೆಇಟಗಿ ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಈ ವೇಳೆ ರಾಮಣ್ಣ ಮೂಲತಃ ಹಾವೇರಿ ಜಿಲ್ಲೆಯ ಇಚ್ಚಂಗಿ ಗ್ರಾಮದವರಾಗಿದ್ದು, ಶಿರಹಟ್ಟಿ ತಾಲೂಕಿನ ಕಲ್ಲಾಗನೂರ ಗ್ರಾಮದಲ್ಲಿ ವಾಸವಾಗಿದ್ದರು ಹಾಗೂ ಸುಮಾರು ಎರಡೂವರೆ ವರ್ಷಗಳ ಹಿಂದೆ ಕಾಣೆಯಾಗಿದ್ದರು ಎಂಬ ಮಾಹಿತಿ ಲಭ್ಯವಾಯಿತು. ಆದರೆ ಅವರ ಕಾಣೆಯಾದ ಕುರಿತು ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.
ರಾಮಣ್ಣ ಅವರನ್ನು ಹಿಮಾಚಲ ಪ್ರದೇಶದಿಂದ ಸುರಕ್ಷಿತವಾಗಿ ಸ್ವಗ್ರಾಮಕ್ಕೆ ಕರೆತರಲು ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳನ್ನು ಸಂಪರ್ಕಿಸಿ ಅಗತ್ಯ ಅನುಮತಿ ಪಡೆದರು. ಸರ್ಕಾರದ ನಿರ್ದೇಶನದಂತೆ ನಿರಾಶ್ರಿತರ ಪರಿಹಾರ ಕೇಂದ್ರ, ಧಾರವಾಡದ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಯನ್ನು ಒಳಗೊಂಡ ತಂಡ ರಚಿಸಲಾಯಿತು.
ಕೇಂದ್ರ ಪರಿಹಾರ ಸಮಿತಿ, ಬೆಂಗಳೂರಿನ ಸಹಾಯಕ ಕಾರ್ಯದರ್ಶಿ ಚಂದ್ರಪ್ಪ ಬಿ. ಗೋಕಾಕ ಅವರ ಮುಂದಾಳತ್ವದಲ್ಲಿ ತಂಡವು ರಾಮಣ್ಣ ಅವರನ್ನು ಕರೆತರಲು ಕಾರ್ಯಾಚರಣೆ ಕೈಗೊಂಡಿತು.
ತಂಡ ಸೆಪ್ಟೆಂಬರ್ 30ರಂದು ಬೆಂಗಳೂರಿನಿಂದ ಪ್ರಯಾಣ ಬೆಳೆಸಿ ಚಂಡಿಗಡ ತಲುಪಿತು. ಅಲ್ಲಿನ ಉಪವಿಭಾಗಾಧಿಕಾರಿ ಸಮರ್ಥಿಕ ನೇಗಿ ಅವರ ಸಹಕಾರದೊಂದಿಗೆ ರಾಮಣ್ಣ ಅವರನ್ನು ಸುಪರ್ದಿಗೆ ಪಡೆದುಕೊಂಡು, ಬಳಿಕ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಯಿತು.
ಅಕ್ಟೋಬರ್ 3ರಂದು ರಾಮಣ್ಣ ಅವರನ್ನು ಗದಗ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಸಮ್ಮುಖದಲ್ಲಿ ಹಾಜರುಪಡಿಸಲಾಯಿತು. ಅಗತ್ಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಕುಟುಂಬಸ್ಥರಾದ ರೇಣುಕಾ ಕೋಂ ರಾಮಣ್ಣ ಗಂಗಣ್ಣವರ, ಪರಶುರಾಮ ಪೂಜಾರ, ಹೊಳೆಇಟಗಿ ಹಾಗೂ ಬಸವರಡ್ಡಿ ವೆಂಕಟರಡ್ಡಿ ರಡ್ಡೇರ, ಸಾಸಲವಾಡ ಇವರೊಂದಿಗೆ ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಯಿತು.
ಕುಟುಂಬದಿಂದ ದೂರವಾಗಿದ್ದ ರಾಮಣ್ಣ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದು, ಮಾಹಿತಿ ದೊರೆತ ಬಳಿಕ ಜಿಲ್ಲಾಡಳಿತ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅವರನ್ನು ಮರಳಿ ಕರೆತರುವ ಕ್ರಮ ಕೈಗೊಂಡಿದೆ. ಹಿಮಾಚಲ ಪ್ರದೇಶದಿಂದ ಬೆಂಗಳೂರಿಗೆ, ಅಲ್ಲಿಂದ ಗದಗಕ್ಕೆ ಸುರಕ್ಷಿತವಾಗಿ ಕರೆತಂದು ಕುಟುಂಬಸ್ಥರೊಂದಿಗೆ ಸೇರಿಸಲಾಗಿದೆ.
ರಾಮಣ್ಣ ಅವರನ್ನು ಕುಟುಂಬದೊಂದಿಗೆ ಪುನಃ ಸೇರಿಸುವ ಕಾರ್ಯದಲ್ಲಿ ಗದಗ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಹಿಸಿದ ಸಮನ್ವಯದ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.



