ನಿತೇಶ್ ತಿವಾರಿ ನಿರ್ದೇಶನದ ಪೌರಾಣಿಕ ಸಿನಿಮಾ ‘ರಾಮಾಯಣ’ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾದ ಕೇವಲ 12 ದಿನಗಳಲ್ಲಿ ಎಸ್.ಎಸ್. ರಾಜಮೌಳಿ ನಿರ್ದೇಶನದ ‘RRR’ ಚಿತ್ರದ ಭಾರತದ ನಿವ್ವಳ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದೆ.
ಎರಡನೇ ವಾರಾಂತ್ಯದಲ್ಲಿ ಉತ್ತಮ ಗಳಿಕೆ ಕಂಡಿದ್ದ ಸಿನಿಮಾ, ಶನಿವಾರ ₹72.90 ಕೋಟಿ ಹಾಗೂ ಭಾನುವಾರ ₹75 ಕೋಟಿ ನಿವ್ವಳ ಕಲೆಕ್ಷನ್ ಮಾಡಿತ್ತು. ವಾರದ ಮೊದಲ ದಿನವಾದ ಸೋಮವಾರ (12ನೇ ದಿನ) ಗಳಿಕೆಯಲ್ಲಿ ಕೊಂಚ ಇಳಿಕೆಯಾಗಿದ್ದರೂ, ಭಾರತದಲ್ಲಿ ₹32 ಕೋಟಿ ನಿವ್ವಳ ಆದಾಯ ಗಳಿಸಿದೆ. ಇದರೊಂದಿಗೆ ಚಿತ್ರದ ಭಾರತದ ಒಟ್ಟು ನಿವ್ವಳ ಕಲೆಕ್ಷನ್ ₹792.60 ಕೋಟಿಗೆ ತಲುಪಿದೆ.
‘RRR’ ಚಿತ್ರದ ದಾಖಲೆ ಹಿಂದಿಕ್ಕಿದ ರಾಮಾಯಣ
ಎಸ್.ಎಸ್. ರಾಜಮೌಳಿ ನಿರ್ದೇಶನದ ‘RRR’ ಸಿನಿಮಾ ಭಾರತದಲ್ಲಿ ಒಟ್ಟಾರೆ ₹782.20 ಕೋಟಿ ನಿವ್ವಳ ಗಳಿಕೆ ಕಂಡಿತ್ತು. ಇದೀಗ ‘ರಾಮಾಯಣ’ ಬಿಡುಗಡೆಯಾದ ಎರಡು ವಾರಗಳು ಪೂರ್ಣಗೊಳ್ಳುವ ಮುನ್ನವೇ ಈ ದಾಖಲೆಯನ್ನು ಮುರಿದಿದೆ.
ವಿಶ್ವಾದ್ಯಂತ ₹1,437 ಕೋಟಿ ಗಳಿಕೆ
ವಿಶ್ವದಾದ್ಯಂತವೂ ‘ರಾಮಾಯಣ’ ಚಿತ್ರದ ಗಳಿಕೆ ಭರ್ಜರಿಯಾಗಿದೆ. 12 ದಿನಗಳಲ್ಲಿ ಸಿನಿಮಾ ಒಟ್ಟು ₹1,437.25 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಇದರಲ್ಲಿ ಭಾರತದ ಮಾರುಕಟ್ಟೆಯಿಂದ ₹947.25 ಕೋಟಿ ಹಾಗೂ ವಿದೇಶಿ ಮಾರುಕಟ್ಟೆಗಳಿಂದ ₹490 ಕೋಟಿ ಆದಾಯ ಬಂದಿದೆ.
‘ಪುಷ್ಪ 2’ ದಾಖಲೆ ಮೇಲೆ ಚಿತ್ರತಂಡದ ಕಣ್ಣು?
ಸದ್ಯ ಬಾಕ್ಸ್ ಆಫೀಸ್ನಲ್ಲಿ ತನ್ನ ನಾಗಾಲೋಟ ಮುಂದುವರಿಸಿರುವ ‘ರಾಮಾಯಣ’, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರದ ವಿಶ್ವಾದ್ಯಂತದ ₹1,742.10 ಕೋಟಿ ಗಳಿಕೆಯ ದಾಖಲೆಯನ್ನು ಹಿಂದಿಕ್ಕುವತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಯಾವ ಮಟ್ಟ ತಲುಪಲಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ.









