ವಿಜಯಸಾಕ್ಷಿ ಸುದ್ದಿ, ರೋಣ : ಇಲ್ಲಿನ ಮಾರನಬಸರಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಆರ್.ಬಿ. ಪ್ರಭಣ್ಣವರ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಪ್ರಗತಿಗಾಗಿ ಶಾಲೆಗೆ 1 ಲಕ್ಷ ರೂಗಳ ದೇಣಿಗೆಯನ್ನು ಘೋಷಿಸಿ, ಶಿಕ್ಷಕ ವೃತ್ತಿಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಗಿದೆ.
ಮಾರನಬಸರಿ ಗ್ರಾಮದಿಂದ ಅನತಿ ದೂರದಲ್ಲಿರುವ ಹಾಲಕೇರಿ ಗ್ರಾಮದ ಶಿಕ್ಷಕ ಆರ್.ಬಿ. ಪ್ರಭಣ್ಣವರ ಮಾರನಬಸರಿ ಗ್ರಾಮದ ಸಹಿಪ್ರಾ ಶಾಲೆಗೆ ಜೂ 8, 2006ರಿಂದ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿ, ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾಗಿಯೂ ತಮ್ಮ ಕರ್ತವ್ಯವನ್ನು ನಿಭಾಯಿಸಿ ನಿವೃತ್ತರಾಗಿದ್ದಾರೆ. ಹಾಗೆ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಿದ ಇವರು ಶಾಲಾ ಮಕ್ಕಳ ಪ್ರತಿಭೆಯನ್ನು ರಾಷ್ಟç ಮಟ್ಟದಲ್ಲಿ ಕೂಡ ಅನಾವರಣಗೊಳಿಸಿದ್ದಾರೆ.
ಆರ್.ಬಿ. ಪ್ರಭಣ್ಣ ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ 1 ಲಕ್ಷ ರೂಗಳನ್ನು ಘೋಷಣೆ ಮಾಡಿದ್ದು, ಅದರಿಂದ ಬರುವ ಬಡ್ಡಿ ಹಣದಲ್ಲಿ ಮಕ್ಕಳಿಗೆ ಪೂರಕವಾದ ವಾತವರಣ ನಿರ್ಮಿಸಿ ಶಾಲೆಯನ್ನು ಅಭಿವೃದ್ಧಿಪಡಿಸಿ ಎಂದು ತಿಳಿಸಿರುವುದು ಅವರು ಶಾಲಾ ಮಕ್ಕಳ ಮೆಲೆ ಇಟ್ಟಿರುವ ಪ್ರೀತಿಗೆ ಸಾಕ್ಷಿಯಾಗಿದೆ. ಇವರ ಕಾರ್ಯಕ್ಕೆ ಶಾಸಕ ಜಿ.ಎಸ್. ಪಾಟೀಲ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಆರ್.ಬಿ. ಪ್ರಭಣ್ಣವರ ತಾವು ಕರ್ತವ್ಯ ನಿರ್ವಹಿಸಿದ ಶಾಲೆ ಹಾಗೂ ಶಾಲಾ ಮಕ್ಕಳು ಶೈಕ್ಷಣಿಕ ಚಟುವಟಿಕೆಯಲ್ಲಿ ಪ್ರಗತಿಯನ್ನು ಸಾಧಿಸಲಿ ಎಂದು 1 ಲಕ್ಷ ರೂಗಳ ದೇಣಿಗೆಯನ್ನು ನೀಡಿದ್ದು ನಿಜಕ್ಕೂ ಅಭಿನಂದನಾರ್ಹವಾಗಿದ್ದು, ಅವರ ಕಾರ್ಯ ಮೆಚ್ಚುವಂತದ್ದು.
– ಜಿ.ಎಸ್. ಪಾಟೀಲ.
ಶಾಸಕರು ಹಾಗೂ ಖನಿಜ ನಿಗಮದ ಅಧ್ಯಕ್ಷರು.
ಶಾಲೆಯ ಶಿಕ್ಷಕ ಎಸ್.ಇ. ಹೊರಪೇಟಿ ಈ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಶಾಲೆಯಲ್ಲಿ ಕರ್ತವ್ಯ ನಿಭಾಯಿಸಿ ನಿವೃತ್ತರಾದ ಆರ್.ಬಿ. ಪ್ರಭಣ್ಣವರ ಶಾಲೆಯ ಮಕ್ಕಳ ಶೈಕ್ಷಣಿಕ ಹಾಗೂ ಶಾಲಾ ಅಭಿವೃದ್ಧಿಗಾಗಿ 1 ಲಕ್ಷ ರೂ.ಗಳ ದೇಣಿಗೆಯನ್ನು ಘೋಷಿಸಿದ್ದಾರೆ. ಹಾಗೆ ಬ್ಯಾಂಕ್ ಖಾತೆಯಿಂದ ಬರುವ ಬಡ್ಡಿ ಹಣದಲ್ಲಿ ಶಾಲೆಯ ಪ್ರಗತಿಗೆ ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿರುವುದು ಸ್ವಾಗತರ್ಹವಾಗಿದೆ ಎಂದಿದ್ದಾರೆ.