ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳಿಗೆ ಓದಲು ಒಳ್ಳೆಯ ವ್ಯವಸ್ಥೆ, ಸ್ವಚ್ಛ ಪರಿಸರ, ಹೈಟೆಕ್ ಲೈಬ್ರರಿ, ಕಂಪ್ಯೂಟರ್ ಲ್ಯಾಬ್, ವಿದ್ಯಾರ್ಥಿಗಳ ಮನಸ್ಸಿಗೆ ಬೇಸರವಾದರೆ ಮುದ ನೀಡಲು ಬಣ್ಣ ಬಣ್ಣದ ಕಾರಂಜಿ ವ್ಯವಸ್ಥೆ… ಹೀಗೆ, ಖಾಸಗಿ ವಸತಿ ನಿಲಯಗಳಿಗೆ ಸೆಡ್ಡು ಹೊಡೆಯುವ ಇಲ್ಲಿನ ವ್ಯವಸ್ಥೆ ನೋಡಿದರೆ, ಅಬ್ಬಾ! ಇದು ಸರ್ಕಾರಿ ವಿದ್ಯಾರ್ಥಿ ನಿಲಯವೇ ಎಂಬ ಪ್ರಶ್ನೆ ಮೂಡುತ್ತದೆ.
ಇದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಮಾದರಿ ವಸತಿ ನಿಲಯ. ಹೆಸರಿಗೆ ಮಾತ್ರ ಮಾದರಿಯಲ್ಲ, ವ್ಯವಸ್ಥೆಯಲ್ಲೂ ಮಾದರಿಯಾಗಿದೆ. ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ವಸತಿ ನಿಲಯಗಳು ನಿರ್ಮಾಣವಾಗುತ್ತವೆ. ಆದರೆ, ಇಂತಹ ವಸತಿ ನಿಲಯಗಳು ಅವ್ಯವಸ್ಥೆಗಳ ಗೂಡಾಗಿರುವ ವಿದ್ಯಮಾನಗಳು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ. ಆದರೆ, ಗದಗ ನಗರದ ಮುಳಗುಂದ ರಸ್ತೆಯಲ್ಲಿರುವ ಈ ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯ ಅವೆಲ್ಲವುಗಳಿಗೆ ಅಪವಾದವೆಂಬಂತಿದೆ.
180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಸತಿ ನಿಯದಲ್ಲಿ ಆಶ್ರಯ ಪಡೆದಿದ್ದಾರೆ. ಹಾಸ್ಟೆಲ್ ಎದುರು ಗಾರ್ಡನ್, ಕಟ್ಟಡದ ಗೋಡೆಗಳ ಮೇಲೆ ಮನಃಪರಿವರ್ತನೆಯಾಗುವ ಬರಹಗಳು, ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಚಿತ್ರಗಳು, ಅಷ್ಟೇ ಏಕೆ, ವಿದ್ಯಾರ್ಥಿಗಳಿಗೆ ಹಾಸಿಗೆ, ಊಟೋಪಹಾರದ ವ್ಯವಸ್ಥೆಯೂ ಅಷ್ಟೇ ಅಚ್ಚುಕಟ್ಟಾಗಿದೆ.
ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ. ಹೈಟೆಕ್ ಲೈಬ್ರರಿ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಸಾಕಷ್ಟು ಸೌಲಭ್ಯ ನೀಡಲಾಗಿದೆ. ಗದಗ ಜಿಲ್ಲೆಯಲ್ಲಿ ಇದೊಂದು ಮಾದರಿ ವಸತಿ ನಿಲಯವೆಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಸೌಲಭ್ಯಗಳ ಸದುಪಯೋಗ ಪಡೆದುಕೊಂಡ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನೂ ಪಡೆಯುತ್ತಿದ್ದಾರೆ. ಇಲ್ಲಿ ಕಲಿತ ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಮಾದರಿ ಮೆಟ್ರಿಕ್ ನಂತರ ವಸತಿ ನಿಲಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ದಿಗಂತದ ದೇವರಾಜ್ ಅರಸು ಅವರ ಪುತ್ಥಳಿಯನ್ನು ನಿರ್ಮಾಣ ಮಾಡಲಾಗಿದ್ದು, ಅದಕ್ಕೆ ಬಣ್ಣದ ಕಾರಂಜಿ ವ್ಯವಸ್ಥೆ ಮಾಡಲಾಗಿದೆ. ಹೈಟೆಕ್ ಗ್ರಂಥಾಲಯ ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಎಲ್ಲಾ ತರಹದ ಪುಸ್ತಕ ವ್ಯವಸ್ಥೆ ಕಲ್ಪಿಸುತ್ತಿದೆ. ರಾಜ್ಯದಲ್ಲಿಯೇ ಪ್ರಥಮ ಎಂಬಂತೆ ದಿ. ದೇವರಾಜ್ ಅರಸು ಅವರ ಗ್ಯಾಲರಿ ನಿರ್ಮಿಸಲಾಗಿದ್ದು, ಇಲ್ಲಿ ಅರಸು ಅವರ ಬಾಲ್ಯ ಜೀವನ, ಯೌವನ ಹಾಗೂ ಅವರು ರಾಜಕೀಯದಲ್ಲಿ ನಡೆದುಬಂದ ದಾರಿಯ ಬಗ್ಗೆ ತಿಳಿಸುವ ಫೋಟೋ ಗ್ಯಾಲರಿ ಮಾಡಲಾಗಿದೆ.
ಹಾಗೆಂದು, ಈ ಹಾಸ್ಟಲ್‌ಗೆ ವಿಶೇಷ ಅನುದಾನವೇನೂ ಲಭ್ಯವಾಗಿಲ್ಲ. ಎಲ್ಲಾ ವಸತಿ ನಿಲಯಗಳಿಗೆ ಬರುವಷ್ಟೇ ಅನುದಾನ ಈ ವಸತಿ ನಿಲಯಕ್ಕೂ ಬಂದಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಬಸವರಾಜ್ ಬಳ್ಳಾರಿ ಅವರ ವಿಶೇಷ ಮುತುವರ್ಜಿಯಿಂದ ಹಳೆಯ ವಿದ್ಯಾರ್ಥಿಗಳ ಸಂಘವನ್ನು ರಚಿಸಿ, ಅವರ ಹಣಕಾಸಿನ ಸಹಯೋಗದಲ್ಲಿ ಹೈಟೆಕ್ ಸ್ಪರ್ಶ ನೀಡಲಾಗಿದೆ.
ಸರ್ಕಾರದ ವೇತನ ಪಡೆದು, ಕೆಲಸ ಮಾಡಿ ಮನೆಗೆ ಹೋಗುವ ನೌಕರರ ನಡುವೆ ಇಲ್ಲಿಯ ಅಧಿಕಾರಿ ಬಸವರಾಜ್ ಬಳ್ಳಾರಿ ಮಾದರಿಯಾಗಿದ್ದಾರೆ. ಅವರ ಶ್ರಮದಿಂದ ಈ ವಿದ್ಯಾರ್ಥಿ ವಸತಿ ನಿಲಯ ಇಡೀ ಜಿಲ್ಲೆಗೆ ಮಾದರಿ ವಸತಿ ನಿಲಯ ಎಂದು ಖ್ಯಾತಿ ಪಡೆದಿದೆ. ಇದೇ ಮಾದರಿಯಲ್ಲಿ ಗದಗ ಜಿಲ್ಲೆಯ ಏಳು ತಾಲೂಕಿನಲ್ಲಿ ಇಂತಹುದೇ ಹಾಸ್ಟೆಲ್ ಮಾಡಬೇಕೆಂಬ ಗುರಿಯನ್ನು ಇಲಾಖೆ ಇಟ್ಟುಕೊಂಡಿದೆ.