ಗದಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಯೋಜನೆಯಡಿ ಬಡವರಿಗೆ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಜಾಲವನ್ನು ಗದಗ ಪೊಲೀಸರು ಭೇದಿಸಿದ್ದಾರೆ.
ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಗುಜರಾತ್‌ಗೆ ಸಾಗಿಸಲಾಗುತ್ತಿದ್ದ ದಂಧೆಯನ್ನು ಬೆಟಗೇರಿ ಬಡಾವಣೆ ಪೊಲೀಸರು ಪತ್ತೆ ಹಚ್ಚಿದ್ದು, ಕಾರ್ಯಾಚರಣೆಯಲ್ಲಿ ಸುಮಾರು ₹42.88 ಲಕ್ಷ ಮೌಲ್ಯದ ಅಕ್ಕಿ ಹಾಗೂ ಲಾರಿಯನ್ನು ಜಪ್ತಿ ಮಾಡಿದ್ದಾರೆ.
ಗುರುವಾರ ಎಪಿಎಂಸಿ ಆವರಣದಲ್ಲಿರುವ ಆಹಾರ ನಿಗಮದ ಗೋದಾಮಿಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಜಪ್ತಿ ಮಾಡಲಾದ ಅಕ್ಕಿಯನ್ನು ಪರಿಶೀಲಿಸಿ ಪ್ರಕರಣದ ಮಾಹಿತಿ ನೀಡಿದರು.
ಬುಧವಾರ ಸಂಜೆ ಗದಗ ನಗರದ ಮುಂಡರಗಿ ರಸ್ತೆಯ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜ್ ಎದುರು ಅಕ್ಕಿ ತುಂಬಿದ ಲಾರಿಯೊಂದು ಅನುಮಾನಾಸ್ಪದವಾಗಿ ನಿಂತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಬೆಟಗೇರಿ ಬಡಾವಣೆ ಪೊಲೀಸರು ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಿಂದ ಗುಜರಾತ್‌ಗೆ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ.
ಸರ್ಕಾರದ ಪಡಿತರ ಅಕ್ಕಿಯನ್ನು ಮೇಲ್ನೋಟಕ್ಕೆ ಗುರುತಿಸಲಾಗದಂತೆ ಫ್ಯಾಕ್ಟರಿಯಲ್ಲಿ ಪಾಲಿಶ್ ಮಾಡಲಾಗಿತ್ತು. ಅಲ್ಲದೆ, ಇದು ಪಡಿತರ ಅಕ್ಕಿಯಲ್ಲ ಎಂಬಂತೆ ತೋರಿಸಲು ನಕಲಿ ವೇಬಿಲ್ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ಆದರೆ ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅದು ಸರ್ಕಾರದ ಪಡಿತರ ಅಕ್ಕಿಯೇ ಎಂಬುದು ದೃಢಪಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮೂಲದ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಲಾರಿಯನ್ನು ಬಾಡಿಗೆಗೆ ಪಡೆದು ಅಕ್ರಮ ಸಾಗಾಟಕ್ಕೆ ಬಳಸಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಇನ್ನೂ ಅಕ್ಕಿಯನ್ನು ಪಾಲಿಶ್ ಮಾಡಿದ ಫ್ಯಾಕ್ಟರಿ ಮಾಲೀಕರು, ನಕಲಿ ದಾಖಲೆ ಸೃಷ್ಟಿಸಿದ ಕಿಂಗ್‌ಪಿನ್‌ಗಳು ಹಾಗೂ ಈ ಅಕ್ರಮ ಜಾಲದ ಹಿಂದಿರುವ ಪ್ರಮುಖ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಆಹಾರ ನಿರೀಕ್ಷಕ ಜಗದೀಶ ಅಮಾತಿ ಸೇರಿದಂತೆ ಆಹಾರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.



