ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗುತ್ತಿರುವ ಸಚಿವ ಸಂಪುಟ ಪುನರ್‌ರಚನೆ ಹಾಗೂ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಎಲ್ಲ ವಿಚಾರಗಳು ತಿಂಗಳೊಳಗೆ ಬಗೆಹರಿಯಲಿದ್ದು, ಅಂತಿಮ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಂಪುಟ ಪುನರ್‌ರಚನೆ ಹಾಗೂ ನಾಯಕತ್ವ ಬದಲಾವಣೆ ಕುರಿತು ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಯಾರು ಮುಂದುವರಿಯುತ್ತಾರೆ, ಯಾರು ಬದಲಾಗುತ್ತಾರೆ ಎಂಬುದನ್ನು ಅವರೇ ತಿಳಿಸುತ್ತಾರೆ” ಎಂದು ಸ್ಪಷ್ಟಪಡಿಸಿದರು.
ನಿನ್ನೆ ನಡೆದ ಎಸ್‌ಐಆರ್ ಸಂಬಂಧ ಮುಖ್ಯಮಂತ್ರಿ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಮುನಿಯಪ್ಪ, “ಇಡೀ ದೇಶದಲ್ಲಿ ಈ ವಿಚಾರ ಗೊಂದಲ ಸೃಷ್ಟಿಸಿದೆ. ಸಂಘ-ಸಂಸ್ಥೆಗಳೊಂದಿಗೆ ಸಭೆ ನಡೆಸಿ ದುರುಪಯೋಗ ಮತ್ತು ತಡೆಗಟ್ಟುವಿಕೆ ಕುರಿತು ಚರ್ಚೆ ಮಾಡಲಾಗಿದೆ” ಎಂದರು.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುತ್ತಿರುವ ಬಗ್ಗೆ ದೇಶದಾದ್ಯಂತ ಅನುಮಾನಗಳು ಮೂಡುತ್ತಿವೆ. ಮತದಾರರ ಪಟ್ಟಿ ಪರಿಷ್ಕರಣೆ ನಡೆಯಬೇಕು ಎನ್ನುವುದರಲ್ಲಿ ವಿರೋಧವಿಲ್ಲ. ಆದರೆ ಬೇಕಾದವರ ಹೆಸರನ್ನು ಉಳಿಸಿ, ಬೇಡವಾದವರ ಹೆಸರನ್ನು ತೆಗೆದುಹಾಕುವ ರೀತಿಯ ಬೆಳವಣಿಗೆಗಳು ಸರಿಯಲ್ಲ ಎಂದು ಹೇಳಿದರು.
ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಾಗರಿಕರು ಮತ್ತು ಮತದಾರರ ಹಿತದೃಷ್ಟಿಯಿಂದ ಮತದಾನದ ಹಕ್ಕು ಕಾಪಾಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಬಿಎಲ್‌ಎ-2 ನೇಮಕ ಮಾಡಲಾಗಿದ್ದು, ಅವರಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಇನ್ನೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಲಕ್ಷಾಂತರ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ಹೇಳಿದರು.
ಹಣಬಲ ಮತ್ತು ತೋಳುಬಲ ಬಳಸಿದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ರಾಜ್ಯದ ಜನರೇ ಅಂತಿಮ ತೀರ್ಪು ನೀಡುತ್ತಾರೆ. ಕೇರಳದ ಜನರು ಬಹಳ ಜಾಗೃತರಾಗಿದ್ದು, ಅಲ್ಲಿ ಇಂತಹ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಕೆ.ಹೆಚ್. ಮುನಿಯಪ್ಪ ಅಭಿಪ್ರಾಯಪಟ್ಟರು.



