HomeGadag Newsಮೇ 31ರವರೆಗೆ ನೋಂದಣಿ ಕಾರ್ಯ

ಮೇ 31ರವರೆಗೆ ನೋಂದಣಿ ಕಾರ್ಯ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : 2023-24ನೇ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್‌ಎಕ್ಯೂ ಗುಣಮಟ್ಟದ ಜೋಳ ಉತ್ಪನ್ನವನ್ನು ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು, ಮೇ 31ರವರೆಗೆ ನೋಂದಣಿ ಕಾರ್ಯ ಕೈಗೊಳ್ಳಲಾಗುವುದು. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾ ಭವನದಲ್ಲಿ ಗುರುವಾರ 2023-24ನೇ ಸಾಲಿನ ಹಿಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜೋಳ ಕೃಷಿ ಹುಟ್ಟುವಳಿ ಖರೀದಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಮಾನದಂಡಗಳನ್ವಯ ಎಫ್‌ಎಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು.

ಖರೀದಿ ಏಜ್ಸನಿಯವರು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು. ಪ್ರತಿ ಖರೀದಿ ಕೇಂದ್ರಕ್ಕೆ ಗ್ರೇಡರ್‌ಗಳನ್ನು ನೇಮಿಸಬೇಕು. ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರಗೆ 20 ಕ್ವಿಂಟಾಲ್‌ನಂತೆ ರೈತರಿಂದ ಅವರು ಹೊಂದಿರುವ ಜಮೀನಿಗೆ ಅನುಗುಣವಾಗಿ ಎಫ್‌ಐಡಿ ಪ್ರಕಾರ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಡಾ. ಹಂಪಣ್ಣ ಸಜ್ಜನ ಮಾತನಾಡಿ, ಜೋಳ ಉತ್ಪನ್ನ ಖರೀದಿ ನೋಂದಣಿ ಕಾರ್ಯವನ್ನು ಮೇ 31ರವರೆಗೆ ಕೈಗೊಳ್ಳಲಾಗುವುದು. ಪ್ರತಿ ಕ್ವಿಂಟಲ್‌ಗೆ ಜೋಳ-(ಹೈಬ್ರೀಡ್) 3180 ರೂ ಹಾಗೂ ಜೋಳ-(ಮಾಲ್ಡಂಡಿ) ಗೆ 3225 ರೂ. ನಿಗದಿಪಡಿಸಲಾಗಿದ್ದು, ಖರೀದಿ ಪ್ರಕ್ರಿಯೆ ಎಪ್ರಿಲ್ 1ರಿಂದ ಮೇ 31ರವರೆಗೆ ಜರುಗಲಿದೆ. ಶಾಖಾ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಶಾಖಾ ಗದಗ ಹಾಗೂ ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನರಗುಂದ ಈ ಎರಡು ಸಂಸ್ಥೆಗಳನ್ನು ಖರೀದಿ ಸಂಸ್ಥೆಗಳನ್ನಾಗಿ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ 5 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಕೃಷಿ ಇಲಾಖೆ, ಎಪಿಎಂಸಿ ಕಾರ್ಯದರ್ಶಿ, ಕೃಷಿ ಮಾರಾಟ ಇಲಾಖೆ, ಕಾನೂನು ಮಾಪನ ಇಲಾಖೆ, ಕೆ.ಎಫ್.ಸಿ.ಎಸ್.ಸಿ ಹಾಗೂ ಮಾರ್ಕೆಟಿಂಗ್ ಫೆಡರೇಶನ್‌ನ ಶಾಖಾ ವ್ಯವಸ್ಥಾಪಕರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಖರೀದಿ ಮಾರ್ಗಸೂಚಿಗಳನ್ವಯ ಜಿಲ್ಲೆಯ 5 ಕಡೆಗಳಲ್ಲಿ ನಿಗದಿಪಡಿಸಲಾದ ಜೋಳ ಖರೀದಿ ಕೇಂದ್ರಗಳು: ಗದಗ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ, ಲಕ್ಷ್ಮೇಶ್ವರ ಎಪಿಎಂಸಿ ಪ್ರಾಂಗಣ, ಮುಂಡರಗಿ ಎಪಿಎಂಸಿ ಪ್ರಾಂಗಣ, ನರಗುಂದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ, ರೋಣ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ.

LEAVE A REPLY

Please enter your comment!
Please enter your name here

E-Paper

E-paper

Must Read

spot_img