ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಳೆದ ಕೆಲವು ತಿಂಗಳಿಂದ 100 ರೂ ಗಡಿ ದಾಟಿದ್ದ ಟೊಮೇಟೋ ಬೆಲೆ ದಿಢೀರ್ ಪಾತಾಳಕ್ಕೆ ಕುಸಿದಿದ್ದರಿಂದ ಅಸಮಾಧಾನಗೊಂಡ ರೈತರು ಬುಧವಾರ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಟೊಮೇಟೋ ಹಣ್ಣನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಮಾರುಕಟ್ಟೆಯಲ್ಲಿ ಟೊಮೇಟೋ ಬೆಲೆ ಹೆಚ್ಚಿರುವುದರಿಂದ ಅನೇಕ ರೈತರು ಸಾಕಷ್ಟು ಖರ್ಚು ಮಾಡಿ ಟೊಮೆಟೋ ಬೆಳೆದಿದ್ದರು. ಇದೀಗ ಮಾರುಕಟ್ಟೆಗೆ ಅಗತ್ಯಕ್ಕಿಂತ ಹೆಚ್ಚು ಟೊಮೇಟೋ ಬರುತ್ತಿದೆಯಲ್ಲದೇ, ಅತಿಯಾದ ಮಳೆ/ ತಂಪಾದ ವಾತಾವರಣದಿಂದ ಗುಣಮಟ್ಟವೂ ಕುಸಿದಿದೆ. ಹೀಗಾಗಿ, ಬೆಲೆ ಸಂಪೂರ್ಣ ಕುಸಿದಿದೆ. ಟೊಮೆಟೋ ದರ ಒಂದು ಬಾಕ್ಸ್ಗೆ ಬುಧವಾರದ ಸಗಟು ಧಾರಣೆ (20-25 ಕೆಜಿ) ದರ 50-60 ರೂ ಆಗಿರುವುದು ರೈತರ ಅಕ್ರೋಶಕ್ಕೆ ಕಾರಣವಾಗಿತ್ತು.
ಕಳೆದ ಎರಡು ವಾರಗಳಿಂದ ಏರುಪೇರು ಆಗುತ್ತಿದ ಪ್ರತಿ 25 ಕೆ.ಜಿ ಟೊಮೇಟೋ ಬೆಲೆ 100 ರಿಂದ 150 ರೂ.ವರೆಗೆ ಇತ್ತು. ಆದರೆ ಬುಧವಾರ ಏಕಾಏಕಿ ಕುಸಿತ ಕಂಡಿದ್ದರಿಂದ ರೈತರು ತಮ್ಮ ಅಸಮಾಧಾನಗೊಂಡುಎಲ್ಲಾ ಹಣ್ಣುಗಳನ್ನು ಬಿದಿಗೆ ಚೆಲ್ಲಿ ಆಕ್ರೋಶ ಹೊರಹಾಕಿದರು. ಕೆಲ ರೈತರು ಜನರನ್ನು ಕರೆದು ಉಚಿತವಾಗಿ ಟೊಮೆಟೋ ಹಂಚಿದರು.
ವರದಾ/ತುಂಗಭದ್ರಾ ನದಿ ಪಾತ್ರದ ಗ್ರಾಮಗಳ ರೈತರು ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೋ ಬೆಳೆದಿದ್ದಾರೆ. ಹಣ್ಣು ಮಾರುಕಟ್ಟೆಗೆ ತರಲು ಆಳಿನ ಪಗಾರ, ಸಾಗಾಟದ ಖರ್ಚು-ವೆಚ್ಚವೂ ಸಿಗದ್ದರಿಂದ ರೊಚ್ಚಿಗೆದ್ದ ರೈತ ವೀರಣ್ಣ ಬಣಗಾರ ಟೊಮೇಟೊ ಹಣ್ಣನ್ನು ನೆಲಕ್ಕೆ ಸುರವಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಕುರಿತು ವ್ಯಾಪಾರಸ್ಥ ಮಂಜುನಾಥ ಹೊಗೆಸೊಪ್ಪಿನ ಪ್ರತಿಕ್ರಿಯಿಸಿ, ಕಳೆದ ಮೂರ್ನಾಲ್ಕು ದಿನಗಳಿಂದ ಪಟ್ಟಣದ ಮಾರುಕಟ್ಟೆಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಟೊಮೇಟೋ ಬರುತ್ತಿದೆ. ಎಲ್ಲವನ್ನು ಖರೀದಿಸಿ ಮಾರಾಟ ಮಾಡುವಷ್ಟು ದೊಡ್ಡ ಪ್ರಮಾಣದ ಮಾರುಕಟ್ಟೆ ವ್ಯವಸ್ಥೆ ಇಲ್ಲಿಲ್ಲ ಮತ್ತು ಎಲ್ಲ ಕಡೆಯೂ ಹಣ್ಣಿನ ಬೆಲೆ ಕಡಿಮೆಯಾಗಿದೆ. ರೈತರ ಕಷ್ಟ-ನಷ್ಟದ ಪರಿಸ್ಥಿತಿ ನಮಗೂ ಬೇಸರ ತರಿಸುತ್ತದೆ.ಆದರೆ ಕೆಲವೊಮ್ಮೆ ಹೀಗಾಗುತ್ತದೆ ಎಂದರು.