ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಉದ್ಯೋಗದ ಜೊತೆಗೆ ಅವರ ಹಕ್ಕುಗಳು, ಕೂಲಿ ಪಾವತಿ, ಕೆಲಸದ ಸ್ಥಳದಲ್ಲಿನ ಸೌಲಭ್ಯಗಳು ಹಾಗೂ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಬಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ್ರಳ್ಳಿ ತಾಂಡಾದಲ್ಲಿ ಗುರುವಾರ ರೋಜ್ಗಾರ್ ದಿನಾಚರಣೆ ನಡೆಯಿತು.
ವಿಬಿಜಿ ರಾಮ್ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಸಮುದಾಯ ಕಾಮಗಾರಿ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಮಗಾರಿ ಸ್ಥಳಕ್ಕೆ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಧರ್ಮರ ಕೃಷ್ಣಪ್ಪ ಭೇಟಿ ನೀಡಿ, ಕೂಲಿಕಾರರೊಂದಿಗೆ ಸಂವಾದ ನಡೆಸಿದರು.
ಕಾರ್ಮಿಕರು ನಿಗದಿಪಡಿಸಿದ ಅಳತೆಗೆ ಅನುಗುಣವಾಗಿ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ಕೆಲಸಕ್ಕೆ ಹಾಜರಾಗುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ದಾಖಲಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಯಡಿ ಕಾರ್ಮಿಕರಿಗೆ ಯೋಜನೆಯ ಉದ್ದೇಶ, ಉದ್ಯೋಗದ ದಿನಗಳು, ಕೂಲಿ ದರ ಹಾಗೂ ಕಾರ್ಮಿಕರಿಗೆ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ವಿವರವಾಗಿ ಮಾಹಿತಿ ನೀಡಲಾಯಿತು.
ದಿನಗೂಲಿ ಮೊತ್ತವನ್ನು ₹370ರಿಂದ ₹382ಕ್ಕೆ ಹೆಚ್ಚಿಸಿರುವುದು ಹಾಗೂ ವಾರ್ಷಿಕ ಮಾನವ ದಿನಗಳ ಮಿತಿಯನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಿರುವುದನ್ನು ತಿಳಿಸಲಾಯಿತು. ಒಂದು ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ ಮೂಲಕ ವಾರ್ಷಿಕ ₹47,750ರವರೆಗೆ ಕೂಲಿ ಪಡೆಯಲು ಅವಕಾಶವಿದ್ದು, ಕಾರ್ಮಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಲಾಯಿತು.
ನೂತನ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 318 ಬಗೆಯ ಕಾಮಗಾರಿಗಳಿಗೆ ಅವಕಾಶವಿದ್ದು, ಗ್ರಾಮಗಳ ಅಭಿವೃದ್ಧಿಯ ಜತೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕಾರ್ಮಿಕರಿಗೆ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು. ಈ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿರುವ ಕುರಿತು ಕಾಯಕ ಬಂಧುಗಳು ನಿಗಾ ವಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.
ಕೆರೆ ಹೂಳೆತ್ತುವಂತಹ ಸಮುದಾಯ ಕಾಮಗಾರಿಗಳಿಂದ ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯುವುದರ ಜತೆಗೆ ಜಲಸಂರಕ್ಷಣೆಗೂ ಉತ್ತೇಜನ ದೊರೆಯಲಿದೆ. ಮಳೆ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಮೂಲಕ ಕೃಷಿ ಹಾಗೂ ಗ್ರಾಮೀಣ ಬದುಕಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಇಂತಹ ಕಾಮಗಾರಿಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಪಿಡಿಒ ಹನುಮಂತಪ್ಪ ಲಮಾಣಿ, ತಾಂತ್ರಿಕ ಸಂಯೋಜಕ ಹರೀಶ್ ಸೋಬರದ, ಟಿಐಇಸಿ ಮಂಜುನಾಥ ಸ್ವಾಮಿ ಹಂಜಿಗಿಮಠ, ಟಿಎಇ ಶ್ರೀನಿವಾಸ್ ಕಲಾಲ್, ಕಾರ್ಯದರ್ಶಿ ಸುರೇಶ್ ಹಡಪದ, ಎಸ್ಡಿಎ ಯಲ್ಲಪ್ಪ ನಡುವಿನಕೇರಿ, ಬಿಎಫ್ಟಿ ಶಿಲ್ಪಾ ಲಮಾಣಿ, ಜಿಕೆಎಂ ಗಂಗಮ್ಮ ಹರಿಜನ, ಟಿಆರ್ಎಂ ಭೀಮಪ್ಪ ರಾಥೋಡ್, ಕಾಯಕ ಬಂಧುಗಳು ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 325 ಕೂಲಿಕಾರರು ಭಾಗವಹಿಸಿದ್ದರು.
ಕಾರ್ಮಿಕರು ನಿಗದಿಪಡಿಸಿದ ಅಳತೆಗೆ ಅನುಗುಣವಾಗಿ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ ಸಮಾನ ಕೂಲಿ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ದಾಖಲಿಸಬೇಕು.
— ಧರ್ಮರ ಕೃಷ್ಣಪ್ಪ, ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ)



