ವಿಜಯಸಾಕ್ಷಿ ಸುದ್ದಿ, ಗದಗ: ಪಿಯು ಹಾಗೂ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಗಳನ್ನು ಕ್ಯಾಂಪಸ್ನಿಂದ ದೂರವಿಡಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮವನ್ನು ಎಐಡಿಎಸ್ಒ ಗದಗ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಶಿಕ್ಷಣ ವ್ಯವಸ್ಥೆ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಧ್ವನಿಯಾಗುವ ಮತ್ತು ಅವುಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ನಡೆಸುವಲ್ಲಿ ವಿದ್ಯಾರ್ಥಿ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರಾಜಕೀಯ ಪಕ್ಷಗಳಿಗೆ ಕಡಿವಾಣ ಹಾಕುವ ನೆಪದಲ್ಲಿ ವಿದ್ಯಾರ್ಥಿಗಳನ್ನು ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಿಂದ ದೂರವಿಡುವುದು ಸರಿಯಲ್ಲ. ವಿದ್ಯಾರ್ಥಿ ಸಂಘಟನೆಗಳನ್ನೇ ನಿಷೇಧಿಸಿದರೆ ವಿದ್ಯಾರ್ಥಿಗಳ ಸಂಘಟಿತ ಹೋರಾಟಕ್ಕೆ ಹಿನ್ನಡೆಯಾಗಲಿದೆ ಎಂದು ಎಐಡಿಎಸ್ಒ ಆತಂಕ ವ್ಯಕ್ತಪಡಿಸಿದೆ.
ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವ ಸರ್ಕಾರದ ನಿರ್ಧಾರವನ್ನು ಎಐಡಿಎಸ್ಒ ಬೆಂಬಲಿಸಿತ್ತು. ಆದರೆ, ಈಗ ವಿದ್ಯಾರ್ಥಿ ಸಂಘಟನೆಗಳನ್ನು ಕಾಲೇಜು ಕ್ಯಾಂಪಸ್ಗೆ ಪ್ರವೇಶಿಸದಂತೆ ತಡೆಯುವ ಚಿಂತನೆ ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ ಎಂದು ಸಂಘಟನೆ ಆರೋಪಿಸಿದೆ.
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಹೋರಾಟ ನಡೆಸುವ ಸಂಘಟನೆಗಳನ್ನು ನಿಷೇಧಿಸುವುದು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ದಾಳಿಯಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ನಿಲುವನ್ನು ಹಿಂಪಡೆದು ವಿದ್ಯಾರ್ಥಿ ಸಂಘಟನೆಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು.
— ಎಂ. ಶಾಂತಿ, ಜಿಲ್ಲಾ ಸಂಚಾಲಕಿ, ಎಐಡಿಎಸ್ಒ ಗದಗ



