ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಜಯಂತಿಯ ಅಂಗವಾಗಿ ಲಕ್ಕುಂಡಿಯಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಈದ್ ಮಿಲಾದ್ ಆಚರಿಸಿದರು.
ಅಂಜುಮನ್-ಎ-ಇಸ್ಲಾಂ ಕಮಿಟಿ ಹಾಗೂ ಟಿಪ್ಪು ಸುಲ್ತಾನ್ ಯೂತ್ ಅಸೋಸಿಯೇಷನ್ ಸಹಯೋಗದಲ್ಲಿ ಪಾಪನಾಶಿ ರಸ್ತೆಯ ಮಾಬು ಸುಬಾನಿ ದರ್ಗಾದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಹಾಫೀಜ್ ಸಲೀಂ ಅಹ್ಮದ್ ಮಂಗಳೂರು ಅವರ ನೇತೃತ್ವದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಸಂದೇಶ ಸಾರುವ ಹಾಡುಗಳನ್ನು ಹಾಡಿ ಜಯಘೋಷ ಮೊಳಗಿಸಲಾಯಿತು.
ಮೆರವಣಿಗೆ ಹಿರೇಮಸೂತಿಗೆ ತಲುಪಿದ ಬಳಿಕ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜೀವನ ಹಾಗೂ ಸಂದೇಶಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ನಜೀರ ಅಹ್ಮದ್ ಕಿರೀಟಗೇರಿ, ಉಪಾಧ್ಯಕ್ಷ ದಾದಸಾಬ ಕೊರ್ಲಹಳ್ಳಿ, ಟಿಪ್ಪು ಸುಲ್ತಾನ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಹೈದರಾಲಿ ನದಾಫ್, ಉಪಾಧ್ಯಕ್ಷ ರಿಯಾಜ್ ಮಸೂತಿ ಸೇರಿದಂತೆ ಮುಸ್ಲಿಂ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.



