ಬೆಂಗಳೂರು: ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಸರ್ಕಾರಿ ಸ್ಥಳಗಳಲ್ಲಿ ಬ್ರೇಕ್ ಹಾಕುವಂತೆ ಮನವಿ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿವಾದ ಉಂಟಾಗುತ್ತಿದ್ದಂತೆಯೇ ಅವರಿಗೆ ಬಂದಿದ್ದ ಬೆದರಿಕೆ ಕರೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಹಾರಾಷ್ಟ್ರದ ಸೋಲಾಪುರ ಮೂಲದ ದಾನಪ್ಪ ಅಲಿಯಾಸ್ ದಾನೇಶ್ ಎಂದು ಗುರುತಿಸಲಾಗಿದೆ. ಬೆಂಗಳೂರು ಮತ್ತು ಕಲಬುರಗಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಲಾತೂರ್‌ನಲ್ಲಿ ದಾನಪ್ಪನನ್ನು ಬಂಧಿಸಿದ್ದಾರೆ.
ದಾನಪ್ಪ ಪ್ರಿಯಾಂಕ್ ಖರ್ಗೆಗೆ ಫೋನ್ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಮುಖಂಡ ಮನೋಹರ್ ಅವರು ಖರ್ಗೆಯ ಪರವಾಗಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದು, ಬಂಧಿತನನ್ನು ಇಂದು ರಾತ್ರಿ ಸದಾಶಿವನಗರ ಠಾಣೆಗೆ ಕರೆತರಲಾಗುವ ಸಾಧ್ಯತೆ ಇದೆ.
ಆರ್‌ಎಸ್‌ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಬರೆದ ಪತ್ರದ ನಂತರ ವಿವಾದ ಚುರುಕುಗೊಂಡಿದೆ. ಬೆದರಿಕೆ ಕರೆಗಳ ಬಗ್ಗೆ ಅವರು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, “ಇದು ಕೇವಲ ಒಂದು ಸ್ಯಾಂಪಲ್ ಮಾತ್ರ. ಈ ರೀತಿಯ ನಿಂದನೆಗಳು ಶಾಖೆ ಸಂಸ್ಕಾರವೇ?” ಎಂದು ಟ್ವೀಟ್ ಮಾಡಿದ್ದಾರೆ.