ಬೆಂಗಳೂರು: ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವುದು, ಕಂದಾಯ ದಾಖಲೆಗಳಲ್ಲಿ ಬದಲಾವಣೆ ಮಾಡುವುದು ಹಾಗೂ ಅರಣ್ಯ ಭೂಮಿಯನ್ನು ಅರಣ್ಯೇತರ ಭೂಮಿ ಎಂದು ಘೋಷಿಸುವ ಅಧಿಕಾರ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.
2002ರ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಕಾಯ್ದೆಯಡಿ ಆಯೋಗಕ್ಕೆ ಸೀಮಿತ ಅಧಿಕಾರಗಳಿವೆ ಎಂದು ಹೈಕೋರ್ಟ್ ತಿಳಿಸಿದೆ. ಆಯೋಗವು ತನಿಖೆ ನಡೆಸುವುದು, ಸಲಹೆ ನೀಡುವುದು, ಮೇಲ್ವಿಚಾರಣೆ ಮಾಡುವುದು ಹಾಗೂ ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿದೆ. ಆದರೆ ಸಿವಿಲ್ ನ್ಯಾಯಾಲಯದಂತೆ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿವಾದಗಳನ್ನು ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡುವ ಅಧಿಕಾರ ಆಯೋಗಕ್ಕಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಅರಣ್ಯ ಭೂಮಿ ಕುರಿತು ನಿರ್ಧರಿಸುವ ಅಧಿಕಾರವಿಲ್ಲ
ಯಾವುದೇ ಜಮೀನು ಅರಣ್ಯ ಭೂಮಿಗೆ ಸೇರಿದ್ದೇ ಅಥವಾ ಇಲ್ಲವೇ ಎಂಬ ಬಗ್ಗೆ ಗಂಭೀರ ಪ್ರಶ್ನೆಗಳು ಹಾಗೂ ದಾಖಲೆಗಳಿಗೆ ಸಂಬಂಧಿಸಿದ ವಿವಾದಗಳಿದ್ದರೆ, ಅಂತಹ ವಿಚಾರಗಳನ್ನು ನಿರ್ಧರಿಸುವ ಅಧಿಕಾರ ಆಯೋಗಕ್ಕೆ ಇರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಅರಣ್ಯ ಭೂಮಿ ಹಾಗೂ ಕಂದಾಯ ದಾಖಲೆಗಳಿಗೆ ಸಂಬಂಧಿಸಿದ ಇಂತಹ ವಿವಾದಗಳನ್ನು ಸಂಬಂಧಪಟ್ಟ ಸಮರ್ಥ ಪ್ರಾಧಿಕಾರಗಳು ಅಥವಾ ನ್ಯಾಯಾಲಯಗಳೇ ಕಾನೂನುಬದ್ಧವಾಗಿ ನಿರ್ಧರಿಸಬೇಕು ಎಂದು ಪೀಠ ತಿಳಿಸಿದೆ.
ದೂರುದಾರರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಮಾತ್ರ ಸಾಮಾನ್ಯ ಆಸ್ತಿ ಮತ್ತು ಕಂದಾಯ ವಿವಾದಗಳನ್ನು ಬಗೆಹರಿಸುವ ಅಧಿಕಾರವನ್ನು ಆಯೋಗ ಚಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ರಾಜ್ಯ ಎಸ್ಸಿ/ಎಸ್ಟಿ ಆಯೋಗ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಏನಿದು ಪ್ರಕರಣ?
ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಶೀಬಿ ಗ್ರಾಮದ ವಿವಿಧ ಸರ್ವೆ ನಂಬರ್ಗಳಿಗೆ ಸೇರಿದ ಜಮೀನುಗಳ ಖಾತೆ ಹಾಗೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು.
ಈ ಜಮೀನುಗಳು ಅರಣ್ಯ ಇಲಾಖೆಗೆ ಸೇರಿವೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಅರಣ್ಯ ಇಲಾಖೆಯ ದಾಖಲೆಗಳಿಂದ ಈ ಜಮೀನುಗಳನ್ನು ಕೈಬಿಟ್ಟು, ಅರ್ಜಿದಾರರ ಹೆಸರಿಗೆ ಖಾತೆ ಮಾಡಿಕೊಡುವಂತೆ ರಾಜ್ಯ ಎಸ್ಸಿ/ಎಸ್ಟಿ ಆಯೋಗವು 2023ರ ಮೇ 18ರಂದು ಆದೇಶ ಹೊರಡಿಸಿತ್ತು.
ಆಯೋಗದ ಈ ಆದೇಶವನ್ನು ಪ್ರಶ್ನಿಸಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಆಯೋಗದ ಅಧಿಕಾರ ವ್ಯಾಪ್ತಿಯನ್ನು ಸ್ಪಷ್ಟಪಡಿಸಿ, ಆಸ್ತಿ ಹಕ್ಕು, ಕಂದಾಯ ದಾಖಲೆ ಹಾಗೂ ಅರಣ್ಯ ಭೂಮಿಗೆ ಸಂಬಂಧಿಸಿದ ವಿವಾದಗಳನ್ನು ಆಯೋಗ ಸಿವಿಲ್ ನ್ಯಾಯಾಲಯದಂತೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.



