ವಿಜಯಸಾಕ್ಷಿ ಸುದ್ದಿ, ನರೇಗಲ್ : ಮಕ್ಕಳ ಮನದಲ್ಲಿ ಯಾವುದೇ ಕಪಟತನ ಇರುವುದಿಲ್ಲ. ಈ ಸಮಯದಲ್ಲಿ ಅವರ ಮನದಲ್ಲಿ ಶಿಕ್ಷಕರು ನೀವು ಏನನ್ನು ಬಿತ್ತುತ್ತೀರೋ ಅದು ಅವರ ಜೀವನದ ಕೊನೆಯವರೆಗೂ ಇರುತ್ತದೆ. ಆದ್ದರಿಂದ ಈ ಮಕ್ಕಳಿಗೆ ಬೋಧನೆ ಮಾಡುವಾಗ ನೀವು ಜಾಗರೂಕತೆಯಿಂದ ಬೋಧನೆ ಮಾಡಬೇಕು ಎಂದು ಶ್ರೀ ಬಸವೇಶ್ವರ ಪ್ರಾಥಮಿಕ ಶಾಲೆಯ ಚೇರಮನ್ ಡಾ. ಜಿ.ಕೆ. ಕಾಳೆ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಶಾಲೆಯ ಶಾಲಾ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ ಅವರು ಮಾತನಾಡಿದರು.
ಪಠ್ಯನ್ನು ಕಲಿಸುವುದು ಮುಖ್ಯವಲ್ಲ, ಪಠ್ಯದೊಂದಿಗೆ ಮಕ್ಕಳಲ್ಲಿ ಸಂಸ್ಕಾರದ ಗುಣಗಳನ್ನು ಬೆಳೆಸಲು ಪ್ರಯತ್ನಿಸಿ. ಮಾನವೀಯ ಮೌಲ್ಯದ ಗುಣಗಳನ್ನು ಅವರಲ್ಲಿ ಬಿತ್ತಿ ಅವರನ್ನು ಸದೃಢ ಭಾರತದ ಸತ್ಪçಜೆಗಳನ್ನಾಗಿ ಮಾಡಿರಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ಮಹಾ ಗುರುಗಳಾದ ಶ್ರೀ ಅನ್ನದಾನೇಶ್ವರರು ನಡೆದಾಡಿದ ಭೂಮಿ ಈ ಪವಿತ್ರ ನೆಲ. ಇಲ್ಲಿ ಕಲಿಯುವ ಮಕ್ಕಳು ಮತ್ತು ಬೋಧಿಸುವ ಶಿಕ್ಷಕರು ನಿಜಕ್ಕೂ ಪುಣ್ಯವಂತರು. ಈ ನೆಲದ ಮಕ್ಕಳು ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಅವರು ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಿ ಬರುವಂತೆ ಅವರಿಗೆ ಬೋಧನೆ ಮಾಡಿ. ಇಂದು ಈ ಶಾಲಾ ಆವರಣದಲ್ಲಿ ಕಾಲಿಟ್ಟ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಸಿಬಿಎಸ್‌ಸಿ ಶಾಲೆಯ ಪ್ರಾಚಾರ್ಯ ಬಿ.ಎಚ್. ಬಂಡಿಹಾಳ, ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ ಮತ್ತು ಸಿಬ್ಬಂದಿಯವರು ಅತಿಥಿಗಳೊಂದಿಗೆ ಮಕ್ಕಳಿಗೆ ಸಿಹಿ ವಿತರಿಸಿ ಶಾಲೆಗೆ ಸ್ವಾಗತಿಸಿದರು.