HomeRaichurಕಷ್ಟದಲ್ಲಿ ಜೊತೆಗಿದ್ದವರನ್ನು ಮರೆಯಬಾರದು : ರಂಭಾಪುರಿ ಶ್ರೀಗಳು

ಕಷ್ಟದಲ್ಲಿ ಜೊತೆಗಿದ್ದವರನ್ನು ಮರೆಯಬಾರದು : ರಂಭಾಪುರಿ ಶ್ರೀಗಳು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ರಾಯಚೂರು : ಸುಖ-ದುಃಖಗಳು ಶಾಶ್ವತವಲ್ಲ. ಸುಖದ ನಂತರ ದುಃಖ, ದುಃಖದ ನಂತರ ಸುಖ ಇದ್ದೇ ಇರುತ್ತದೆ. ಆದರೆ ಕಷ್ಟದಲ್ಲಿ ಜೊತೆಗಿದ್ದವರನ್ನು ಸುಖ ಬಂದಾಗ ಎಂದಿಗೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ನಗರದ ಸಾವಿರದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠದಲ್ಲಿ ಜರುಗಿದ ಶ್ರಾವಣ ಪುರಾಣ ಪ್ರವಚನ ಶತಮಾನೋತ್ಸವ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮೌನ ಮನಸ್ಸನ್ನು ಶುದ್ಧಿ ಮಾಡುತ್ತದೆ. ಸ್ನಾನ ದೇಹ ಶುದ್ಧಿ ಮಾಡುತ್ತದೆ. ಧ್ಯಾನ ಮತ್ತು ಸತ್ಸಂಗ ಶುದ್ಧಿಯನ್ನು ಶುದ್ಧ ಮಾಡುತ್ತದೆ. ಉಪವಾಸ ಆರೋಗ್ಯವನ್ನು ಶುದ್ಧ ಮಾಡುತ್ತದೆ. ಬಳಸಿಕೊಂಡವರನ್ನು ಮರೆತರೂ ಬೆಳೆಸಿದವರನ್ನು ಮರೆಯಬಾರದು. ದುಡಿಯುವ ಕೈಗೆ ಬಡತನವಿಲ್ಲ. ಆಲಸ್ಯದ ಬದುಕಿಗೆ ನೆಮ್ಮದಿ ಇಲ್ಲ.
ಕರ್ತವ್ಯದ ಕಾಲು ದಾರಿಯಲ್ಲಿ ನಡೆಯುವವರಿಗೆ ಯಶಸ್ಸು ನಿಶ್ಚಿತ. ಧಾರ್ಮಿಕ ಮೌಲ್ಯಗಳ ಸಂರಕ್ಷಣೆ ನಮ್ಮೆಲ್ಲರ ಗುರಿಯಾಗಬೇಕು.
ಸತ್ಯ, ಧರ್ಮ, ನ್ಯಾಯ, ನೀತಿ ದೇವರ ಉಳಿತಾಯ ಖಾತೆಗೆ ಜಮಾ ಮಾಡಿದಂತೆ. ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ. ವೀರಶೈವ ಧರ್ಮದಲ್ಲಿ ಸುಖ-ದುಃಖಗಳನ್ನು ಸಮಾನವಾಗಿ ಕಂಡಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳನ್ನು ಪ್ರಸಾರ ಪಡಿಸಿದ ಕೀರ್ತಿ ಕಿಲ್ಲೆ ಬೃಹನ್ಮಠಕ್ಕೆ ಸಲ್ಲುತ್ತದೆ. ಶ್ರಾವಣ ಪುರಾಣದ ಶತಮಾನೋತ್ಸವ ಸಮಾರಂಭ ಹಮ್ಮಿಕೊಂಡಿರುವುದು ತಮಗೆ ಅಪಾರ ಸಂತೋಷ ತಂದಿದೆ. ಇಂದಿನ ಶಾಂತಮಲ್ಲ ಶ್ರೀಗಳು ಈ ಭಾಗದಲ್ಲಿ ಧರ್ಮ ಸಂಸ್ಕೃತಿ ಬೆಳೆಸುತ್ತ ಮತ್ತು ಗುರು ಪರಂಪರೆಯ ಮೌಲ್ಯಗಳನ್ನು ಬೋಧಿಸುತ್ತಾ ಮುನ್ನಡೆದಿರುವುದು ಎಲ್ಲಿಲ್ಲದ ಹರುಷ ತಂದಿದೆ ಎಂದರು.
ನೀಲುಗಲ್ ಡಾ. ಪಂಚಾಕ್ಷರ ಶಿವಾಚಾರ್ಯರು, ದೇವದುರ್ಗದ ಕಪಿಲ ಸಿದ್ಧರಾಮ ಶಿವಾಚಾರ್ಯರು, ಗಬ್ಬೂರು ಬೂದಿಬಸವ ಶಿವಾಚಾರ್ಯರು, ಕರೇಗುಡ್ಡ ಮಹಾಂತಲಿಂಗ ಶಿವಾಚಾರ್ಯರು, ನವಿಲಕಲ್ ಅಭಿನವ ಸೋಮನಾಥ ಶಿವಾಚಾರ್ಯರು, ಸೋಮವಾರಪೇಟೆ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯರಿಗೆ ಗುರು ಕಾರುಣ್ಯ’ ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ತೆಂಡೆಕೆರೆ ಗಂಗಾಧರ ಶಿವಾಚಾರ್ಯರು, ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು, ಮಂಗಳವಾರಪೇಟೆ ವೀರಸಂಗಮೇಶ್ವರ ಶಿವಾಚಾರ್ಯರು, ರೌಡಕುಂದ ಸಿದ್ಧರಾಮ ಶರಣರು, ಚೇಗುಂಟ ಡಾ. ಕ್ಷೀರಲಿಂಗ ಶರಣರು, ಜಾಗಟಗಲ್ ಬೆಟ್ಟದಯ್ಯಪ್ಪ ತಾತ ಮತ್ತು ಸಾಂಬಯ್ಯಪ್ಪ ತಾತ ಸಮಾರಂಭದ ಸಮ್ಮುಖವನ್ನು ವಹಿಸಿದ್ದರು.
ಸಮಾರಂಭವನ್ನು ಉದ್ಘಾಟಿಸಿ ಶ್ರೀ ಗುರುಪಾದ ಶಿವಯೋಗೀಶ್ವರ ಪುರಾಣ ಗ್ರಂಥವನ್ನು ಲೋಕಾರ್ಪಣೆ ಮಾಡಿದ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜ ಮಾತನಾಡಿ, ಕತ್ತಲಲ್ಲಿ ಬೆಳಕಿನ, ಬಿಸಿಲಿನಲ್ಲಿ ನೆರಳಿನ ಮತ್ತು ಜೀವನದ ದಾರಿಯಲ್ಲಿ ಸಾಗುವಾಗ ಒಳ್ಳೆಯವರ ಒಡನಾಟದ ಅವಶ್ಯಕತೆಯಿದೆ. ಜೀವನ ಅನಿಶ್ಚತೆಯಿಂದ ತುಂಬಿದೆ. ಬದುಕಿನಲ್ಲಿ ಒಬ್ಬ ಶ್ರೇಷ್ಠ ಗುರು ಮತ್ತು ಗುರಿ ಹೊಂದಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದರು.
ಶ್ರಾವಣ ಒಂದು ತಿಂಗಳ ಕಾಲ ಪುರಾಣ ಪ್ರವಚನ ಮಾಡಿದ ಮಟ್ಟಿಮಲ್ಲಾಪುರ ಶಾಂತಾಶ್ರಮದ ನಿಜಾನಂದ ಸ್ವಾಮಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ವಿಶೇಷ ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಸ್ಫೂರ್ತಿ ಇಂಡಿಯನ್ ಡ್ಯಾನ್ಸ್ ಅಕಾಡೆಮಿ ತಂಡದವರಿಂದ ಪ್ರಾರ್ಥನೆ, ಡಾ. ಬಿ.ವಿಜಯರಾಜೇಂದ್ರ ಇವರಿಂದ ಸ್ವಾಗತ ಜರುಗಿತು. ಶಿವಮೊಗ್ಗದ ಹೆಚ್.ಶಾಂತಾ ಆನಂದ ನಿರೂಪಿಸಿದರು. ಸಮಾರಂಭದ ನಂತರ ಲಕ್ಷಿö್ಮ ಕರಿಯಪ್ಪ ತುಳಸಿಕಟ್ಟೆ ಅವರಿಂದ ಬಂದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.
ನೇತೃತ್ವ ವಹಿಸಿದ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗುರಿಯೆಡೆಗೆ ತಲುಪುವ ದಾರಿ ಯಾವುದೆಂಬುದನ್ನು ಅರಿತು ನಡೆಯಬೇಕು. ಜೀವನದಲ್ಲಿ ಕಷ್ಟಗಳು ಬಂದಾಗ ಯಾರ ಹತ್ತಿರ ಸಲಹೆ ಕೇಳುತ್ತೇವೆ ಎಂಬುದು ಮುಖ್ಯ. ಯಾಕೆಂದರೆ ದುರ್ಯೋಧನ ಶಕುನಿಯ ಹತ್ತಿರ ಸಲಹೆ ಕೇಳುತ್ತಿದ್ದ. ಆದರೆ ಅರ್ಜುನ ಶ್ರೀ ಕೃಷ್ಣನ ಬಳಿ ಸಲಹೆ ಕೇಳುತ್ತಿದ್ದ. ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮ ಸಿದ್ಧಾಂತದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ಮೌಲ್ಯಗಳ ಪರಿಪಾಲನೆ ಮತ್ತು ಅವುಗಳಿಂದ ಉಂಟಾಗುವ ಜ್ಞಾನವನ್ನು ಪಡೆದು ಬಾಳಬೇಕೆಂದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img