ಯಶ್ ಅವರಿಗೆ 2026ರ ವರ್ಷ ಅತ್ಯಂತ ಮಹತ್ವದ್ದಾಗಿದ್ದು, ಟಾಕ್ಸಿಕ್ ಮತ್ತು ‘ರಾಮಾಯಣ’ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಜ್ಜಾಗಿದ್ದಾರೆ.
ಇತ್ತೀಚೆಗೆ ವಿದೇಶಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಯಶ್, ‘ಟಾಕ್ಸಿಕ್’ ಚಿತ್ರದ ಕಥೆಯ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವು ಕೇವಲ ಆಕ್ಷನ್ ಅಥವಾ ಗ್ಯಾಂಗ್‌ಸ್ಟರ್ ಸಿನಿಮಾ ಮಾತ್ರವಲ್ಲದೆ, ತಂದೆ ಮತ್ತು ಮಗನ ನಡುವಿನ ಭಾವನಾತ್ಮಕ ಸಂಘರ್ಷದ ಮೇಲೆ ಆಧಾರಿತವಾಗಿದೆ ಎಂದು ಹೇಳಿದ್ದಾರೆ.
ಚಿತ್ರದ ಕಥೆ 1961ರವರೆಗೆ ಪೋರ್ಚುಗೀಸ್ ಆಳ್ವಿಕೆಯಲ್ಲಿ ಇದ್ದ ಗೋವಾದ ಕಾಲಘಟ್ಟದಲ್ಲಿ ನಡೆಯುತ್ತದೆ ಎಂಬುದನ್ನು ಯಶ್ ಬಹಿರಂಗಪಡಿಸಿದ್ದು, ಕಥೆಯ ವಿಭಿನ್ನತೆಗೆ ಸಾಕ್ಷಿಯಾಗಿದೆ.
ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಬಹು ತಾರಾಗಣವಿದ್ದು, ಟೀಸರ್ ಈಗಾಗಲೇ ಭಾರೀ ಪ್ರತಿಕ್ರಿಯೆ ಪಡೆದಿದೆ. ಟ್ರೇಲರ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಮೊದಲಿಗೆ ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು ಜೂನ್ 4ಕ್ಕೆ ಮುಂದೂಡಲಾಗಿದ್ದು, ಇದೀಗ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುವ ನಿರೀಕ್ಷೆ ಇದೆ.



