ಭೂತ್ ಬಾಂಗ್ಲಾ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಮತ್ತೆ ಒಂದಾಗಿದ್ದರೂ, ಈ ಬಾರಿ ಚರ್ಚೆಗೆ ಕಾರಣವಾಗಿದ್ದು ಸಂಭಾವನೆ ವಿಚಾರ.
ಇತ್ತೀಚಿನ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದ ಹಿನ್ನೆಲೆ, ಅಕ್ಷಯ್ ಕುಮಾರ್ ತಮ್ಮ ಸಂಭಾವನೆಯಲ್ಲಿ ಕಡಿತ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ‘ಜಾಲಿ ಎಲ್ಎಲ್ಬಿ 3’ಗೆ 70 ಕೋಟಿ ಪಡೆದಿದ್ದ ಅವರು, ‘ಭೂತ್ ಬಾಂಗ್ಲಾ’ಗೆ 50 ಕೋಟಿ ರೂಪಾಯಿಗೆ ಒಪ್ಪಿಕೊಂಡಿದ್ದಾರೆ.
ಚಿತ್ರದಲ್ಲಿ ಟಬು, ಪರೇಶ್ ರಾವಲ್, ರಾಜ್ಪಾಲ್ ಯಾದವ್ ಹಾಗೂ ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಾಮಿಕಾ ಗಬ್ಬಿ 3 ಕೋಟಿ ರೂ. ಪಡೆದು ತಮ್ಮ ಮಾರುಕಟ್ಟೆ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಟಬು ಅವರು 2.5 ಕೋಟಿ ರೂ., ಪರೇಶ್ ರಾವಲ್ 2 ಕೋಟಿ ರೂ. ಹಾಗೂ ರಾಜ್ಪಾಲ್ ಯಾದವ್ 1.5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
120 ಕೋಟಿ ರೂ. ಬಜೆಟ್ನ ಈ ಹಾರರ್-ಕಾಮಿಡಿ ಸಿನಿಮಾ, ಅಕ್ಷಯ್ ಕುಮಾರ್ಗೆ ಮತ್ತೊಂದು ದೊಡ್ಡ ಕಂಬ್ಯಾಕ್ ನೀಡುತ್ತದೆಯೇ ಎಂಬುದು ಸಿನಿ ವಲಯದ ಕಣ್ಣುಗಳಲ್ಲಿದೆ.



