ಬೆಂಗಳೂರು: ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ದೆಹಲಿ ಮತ್ತು ಆಂಧ್ರಪ್ರದೇಶ ತಂಡಗಳ ನಡುವಿನ ವಿಜಯ್ ಹಜಾರೆ ಟೂರ್ನಿ ಪಂದ್ಯಕ್ಕೆ ಪೊಲೀಸರ ಅನುಮತಿ ನೀಡಲಾಗಿಲ್ಲ.
ಪಂದ್ಯ ನಡೆಯುವ ಪರಿಸ್ಥಿತಿಯನ್ನು ಪರಿಶೀಲಿಸಲು ಸೋಮವಾರ ಬೆಂಗಳೂರು ಆಯುಕ್ತ ಸೀಮಂತ್ ಕುಮಾರ್ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿಯೂ ಸ್ಥಳಕ್ಕೆ ಬಂದು ಸುರಕ್ಷತೆ ಕ್ರಮಗಳನ್ನು ತಪಾಸಣೆ ಮಾಡಿದರು.
ಪರಿಶೀಲನೆಯ ನಂತರ ತಂಡವು ಸರ್ಕಾರಕ್ಕೆ ವರದಿ ಸಲ್ಲಿಸಿತು. ಅಂತಿಮವಾಗಿ, ಬೆಂಗಳೂರು ಪೊಲೀಸರು ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಅನುಮತಿ ನೀಡದ ನಿರ್ಧಾರ ಕೈಗೊಂಡಿದ್ದಾರೆ.
ಸ್ಟೇಡಿಯಂನಲ್ಲಿ ಇನ್ನಷ್ಟು ಸುರಕ್ಷತಾ ಕ್ರಮ ಅಳವಡಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಬಂದಿದೆ. ಜೊತೆಗೆ ನಾಳೆ ಮ್ಯಾಚ್‌ಗೆ ವಿರಾಟ್ ಕೊಹ್ಲಿ ಆಗಮಿಸುವುದರಿಂದ ಹೊರಭಾಗದಲ್ಲಿ ಅಭಿಮಾನಿಗಳು ಸೇರುವ ಆತಂಕ ವ್ಯಕ್ತವಾಗಿದೆ.
ಸ್ಟೇಡಿಯಂ ಗೇಟ್ ಹೊರಭಾಗದಲ್ಲಿಯೇ ಕಾಲ್ತುಳಿತ ದುರಂತ ಸಂಭವಿಸಿತ್ತು. ಹೀಗಾಗಿ ನಾಳೆ ಮತ್ತಷ್ಟು ಅಭಿಮಾನಿಗಳು ಸೇರಿದರೆ ಕಷ್ಟ ಅನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಗೇಟ್ ಅಗಲೀಕರಣ ಮತ್ತು ಜನ ಒಡಾಡಲು ಅನುಕೂಲವಾಗುವ ವಾತಾವರಣವನ್ನು ಸ್ಟೇಡಿಯಂ ನಿರ್ಮಾಣ ಮಾಡದ ಕಾರಣ ಪೊಲೀಸರು ಪಂದ್ಯ ಆಯೋಜನೆಗೆ ಅನುಮತಿ ನೀಡಿಲ್ಲ.



