ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಗನನ್ನೇ ತಾಯಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತರ ಜೊತೆ ಸೇರಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.

ಕೊಲೆಯಾದ ಯುವಕನನ್ನು ಬೆಂಗಳೂರಿನ ಆರ್.ಟಿ. ನಗರ ನಿವಾಸಿ ವಿಜಯ್ ನಾರಾಯಣ್ (24) ಎಂದು ಗುರುತಿಸಲಾಗಿದೆ.
ಕನ್ನಡ ಬಾವುಟದಿಂದ ಕುತ್ತಿಗೆ ಬಿಗಿದು ವಿಜಯ್‌ನನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು.
ಯುವಕನ ಮೊಬೈಲ್ ಕರೆಗಳ ವಿವರಗಳನ್ನು ಆಧರಿಸಿ ಮಾಳಮಾರುತಿ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಕೊಲೆಯ ಹಿಂದಿನ ರಹಸ್ಯ ಬಯಲಾಗಿದೆ. ವಿಜಯ್‌ನ ತಾಯಿ ಮೀನಾ, ಆಕೆಯ ಪ್ರಿಯಕರ ರಾಕೇಶ್ ಹಾಗೂ ಆತನ ಸ್ನೇಹಿತರು ಕೃತ್ಯದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೀನಾ ನಾರಾಯಣ್ ಬ್ಯೂಟಿ ಪಾರ್ಲರ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಮಹಾರಾಷ್ಟ್ರ ಮೂಲದ ರಾಕೇಶ್ ಎಂಬಾತನ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ರಾಕೇಶ್‌ನನ್ನೇ ಮೀನಾ ತನ್ನ ಕಾರು ಚಾಲಕನನ್ನಾಗಿ ನೇಮಿಸಿಕೊಂಡಿದ್ದಳು. ಇವರಿಬ್ಬರ ಸಂಬಂಧದ ವಿಚಾರ ತಿಳಿದ ವಿಜಯ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದರಿಂದ ವಿಜಯ್ ತಮ್ಮ ಸಂಬಂಧಕ್ಕೆ ಅಡ್ಡಿಯಾಗಬಹುದು ಎಂದು ಭಾವಿಸಿದ ಮೀನಾ ಮತ್ತು ರಾಕೇಶ್, ಆತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಹೋಗೋಣ ಎಂದು ಹೇಳಿ ವಿಜಯ್‌ನನ್ನು ಬೆಳಗಾವಿಗೆ ಕರೆತಂದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನಾ, ರಾಕೇಶ್ ಮತ್ತು ಆತನ ಸ್ನೇಹಿತರಾದ ಸಚಿನ್, ಮನೋಜ್, ತಮ್ಮಣ್ಣ ಹಾಗೂ ಏಕನಾಥ ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.









