ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯೊಂದಿಗಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಏಳು ಮಂದಿಯನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ನಗರದ ಶ್ರೀರಾಂಪುರದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶೇಖರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಶ್ರೀರಾಂಪುರ ನಿವಾಸಿ ಶೇಖರ್ ಎಂದು ಗುರುತಿಸಲಾಗಿದೆ. ಈತ ಖಾಸಗಿ ಕಂಪನಿಯೊಂದಕ್ಕೆ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಪತ್ನಿ ಸೇರಿದಂತೆ ಕುಟುಂಬದ 7 ಮಂದಿಯ ಹತ್ಯೆ?
ಪತ್ನಿ ಬೈಯುತ್ತಿದ್ದಳು ಹಾಗೂ ಆಗಾಗ ಜಗಳ ಮಾಡುತ್ತಿದ್ದಳು ಎಂಬ ಸಿಟ್ಟಿನಿಂದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಪತ್ನಿ, ಅತ್ತೆ, ಪತ್ನಿಯ ಇಬ್ಬರು ಅಣ್ಣಂದಿರು, ಇಬ್ಬರು ಅತ್ತಿಗೆ ಹಾಗೂ ಏಳು ವರ್ಷದ ಮಗುವನ್ನು ಹತ್ಯೆ ಮಾಡಿರುವ ಆರೋಪ ಆತನ ಮೇಲಿದೆ.
ರುಬ್ಬುವ ಕಲ್ಲಿನಿಂದ ಹತ್ಯೆ ಮಾಡಿ, ಬಳಿಕ ಅದನ್ನು ತೊಳೆದಿಟ್ಟಿದ್ದಾನೆ ಎನ್ನಲಾಗಿದೆ. ನಂತರ ತನ್ನ ಕ್ಯಾಬ್ನಲ್ಲಿಯೇ ಮೃತದೇಹಗಳನ್ನು ಸಾಗಿಸಿ ನಂದಿಬೆಟ್ಟ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.
15 ದಿನಗಳ ಹಿಂದೆ ಮಿಸ್ಸಿಂಗ್ ದೂರು ನೀಡಿದ್ದ ಆರೋಪಿ
ಈ ಪ್ರಕರಣದ ಬಗ್ಗೆ ಉತ್ತರ ವಿಭಾಗದ ಡಿಸಿಪಿ ನ್ಯಾಮೇಗೌಡ ಮಾಹಿತಿ ನೀಡಿದ್ದಾರೆ. ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ ಬಳಿಕ ಆರೋಪಿಯೇ ಶ್ರೀರಾಂಪುರ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ನೀಡಿದ್ದ ಎನ್ನಲಾಗಿದೆ.
ಸುಮಾರು 15 ದಿನಗಳ ಹಿಂದೆ ಪತ್ನಿ ಹಾಗೂ ಮನೆಯವರು ಕಾಣೆಯಾಗಿದ್ದಾರೆ ಎಂದು ಆರೋಪಿ ದೂರು ದಾಖಲಿಸಿದ್ದ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತದೇಹಗಳಿಗಾಗಿ ಪೊಲೀಸರಿಂದ ಹುಡುಕಾಟ
ಆರೋಪಿಯನ್ನು ಬಂಧಿಸಿರುವ ಪೊಲೀಸರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ನಡೆದಿರುವ ನಿಖರ ಕಾರಣ ಹಾಗೂ ಮೃತದೇಹಗಳನ್ನು ಎಲ್ಲಿ ಎಸೆಯಲಾಗಿದೆ ಎಂಬುದರ ಕುರಿತು ರಾಜಾಜಿನಗರ ಮತ್ತು ಶ್ರೀರಾಂಪುರ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.
ಏಳು ಮಂದಿಯ ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿರುವ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.










