ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಮನುಷ್ಯ ಜೀವನ ಶ್ರೇಷ್ಠವಾದುದು. ಅರಿತು ಬಾಳುವುದರಲ್ಲಿ ಸುಖ-ಶಾಂತಿಯಿದೆ. ಚಂಚಲ ಮನಸ್ಸನ್ನು ತಣ್ಣಗಿಡುವ ಜೀವನ ಮಾರ್ಗವೇ ಆಧ್ಯಾತ್ಮ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಶ್ರೀ ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಅಂಗವಾಗಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಸಿದ್ಧಾಂತ ಶಿಖಾಮಣಿ ಗ್ರಂಥ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬದುಕು ಬಲಗೊಳ್ಳಲು ಆಧ್ಯಾತ್ಮದ ಅರಿವು ಸಾಧನೆ ಮತ್ತು ನಿರಂತರ ಪ್ರಯತ್ನ ಬೇಕು. ಧರ್ಮ ಆಚರಣೆ ಬೇರೆ ಬೇರೆಯಾದರೂ ಅವುಗಳ ಗುರಿ ಒಂದೇಯಾಗಿದೆ. ಸತ್ಯದ ಸತ್ಪಥದಲ್ಲಿ ಜೀವನ ವಿಕಾಸಗೊಳ್ಳಬೇಕು. ಯಾವ ಸಂಪತ್ತಿಗಾಗಿ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ.
ಮಲಿನಗೊಂಡ ಮನಸ್ಸಿಗೆ ಶಿವಜ್ಞಾನದ ಬೀಜ ಬಿತ್ತಿ ಮಾಧುರ್ಯದ ಫಲಗಳನ್ನು ಪಡೆದುಕೊಳ್ಳು ಪ್ರಯತ್ನಿಸಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ನಿರೂಪಿಸಿದ್ದಾರೆ.
ವಿದ್ಯೆ ಚಿಂತನೆ ಆತ್ಮ ವಿಶ್ಲೇಷಣೆ ಮತ್ತು ಸತ್ಯ ಶುದ್ಧ ಧ್ಯೇಯಗಳು ಜೀವನದ ಶ್ರೇಯಸ್ಸಿಗೆ ಮೆಟ್ಟಿಲುಗಳಾಗಿವೆ ಎಂದರು. ಇದೇ ಸಂದರ್ಭದಲ್ಲಿ ಸಿದ್ಧಾಂತ ಶಿಖಾಮಣಿ ಅಪೂರ್ವ ಕೃತಿಯೊಂದನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು.
ನಿವೃತ್ತ ಐಏಎಸ್ ಅಧಿಕಾರಿ ಮಂಜುನಾಥ ನಾಯ್ಕ, ವೀರಶೈವ ಸಮಾಜದ ಧುರೀಣ ಎನ್.ಜೆ. ರಾಜಶೇಖರ, ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಬಿಳಕಿ ಹಿರೇಮಠದ ರಾಚೋಟೇಶ್ವರ ಶ್ರೀಗಳು, ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶ್ರೀಗಳು, ನುಗ್ಗೇಹಳ್ಳಿ ಡಾ.ಮಹೇಶ್ವರ ಶ್ರೀಗಳು ಉಪದೇಶಾಮೃತವನ್ನಿತ್ತರು.
ನಾಡಿನೆಲ್ಲೆಡೆಯಿಂದ 250ಕ್ಕೂ ಹೆಚ್ಚು ಮಹಿಳೆಯರು ಸಿದ್ಧಾಂತ ಶಿಖಾಮಣಿ ಪಾರಾಯಣ ಮಾಡಿ ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡ ದೃಶ್ಯ ಅಪೂರ್ವವಾಗಿತ್ತು. ಮಳಲಿ ಡಾ.ನಾಗಭೂಷಣ ಶ್ರೀಗಳು ಸ್ವಾಮಿಗಳು ನಿರೂಪಿಸಿದರು.
ಇಂದು ವಿಶ್ವ ಯೋಗ ದಿನವಾಗಿದೆ. ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ದೊಡ್ಡದು. ಮನುಷ್ಯನ ಬದುಕು ಬಹಳಷ್ಟು ಒತ್ತಡದಿಂದ ಕೂಡಿದೆ. ಹಣ ಸಂಪಾದನೆಯೊಂದೇ ಜೀವನದ ಗುರಿಯಲ್ಲ. ಅದರೊಂದಿಗೆ ಒಂದಿಷ್ಟು ಯೋಗ ಧ್ಯಾನ ರೂಢಿಸಿಕೊಂಡರೆ ನೆಮ್ಮದಿ ಜೀವನ ಆರೋಗ್ಯ ದೊರಕಲು ಸಾಧ್ಯವಾಗುತ್ತದೆ.
ಕನಿಷ್ಠ ದಿನ ನಿತ್ಯ ಅರ್ಧ ಗಂಟೆಯಾದರೂ ಯೋಗಾಭ್ಯಾಸ ಮಾಡಿಕೊಂಡು ಬರುವುದು ಒಳ್ಳೆಯದೆಂದು ಶ್ರೀಗಳು ಅಭಿಪ್ರಾಯಪಟ್ಟರು.
Advertisement