ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನಿರಂತರ ಯೋಗಾಬ್ಯಾಸ ಅತ್ಯಂತ ಪರಿಣಾಮಕಾರಿಯಾಗಿದೆ. ಅಲ್ಲದೆ ಬೌದ್ಧಿಕವಾಗಿ ಮೆದುಳನ್ನು ಆರೋಗ್ಯದಲ್ಲಿಡುವುದರ ಜೊತೆಗೆ ಔಷಧಿಗಳಿಂದ ಗುಣಪಡಿಸಲಾಗದ ರೋಗದಿಂದ ಮುಕ್ತಿ ಪಡೆಯಲು ಯೋಗವು ಸಹಕಾರಿಯಾಗಿದೆ ಎಂದು ಬಾಗಮಾರ ಸೇವಾ ಸಂಸ್ಥೆಯ ಕಾರ್ಯದರ್ಶಿ ಅಜಿತಕುಮಾರ ಬಾಗಮಾರ ಹೇಳಿದರು.
ಪಟ್ಟಣದ ಭಗವಾನ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಆಸ್ಪತ್ರೆ ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ಸ್ಥಳೀಯ ಜೋಡು ರಸ್ತೆಯಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗಾಸನಗಳು ಕೇವಲ ದೈಹಿಕ ವ್ಯಾಯಾಮಗಳಾಗದೇ, ಅವು ನಿಲುವುಗಳಾಗಿವೆ. ಶುಭ್ರವಾದ ಸ್ಥಳ, ಒಂದು ಜಮಖಾನೆ, ಮತ್ತು ಮನಸ್ಸಿನ ದೃಢತೆ ಬೇಕಾಗಿರುತ್ತದೆ. ಇತರೆ ದೈಹಿಕ ವ್ಯಾಯಾಮಗಳಿಗೆ ವಿಸ್ತಾರವಾದ ಸ್ಥಳ, ಜನರು ಹಾಗೂ ಸಾಧನ ಸಾಮಗ್ರಿಗಳು ಬೇಕಾಗುತ್ತದೆ. ಆದರೆ ಯೋಗ ಒಂಟಿಯಾಗಿಯೇ ಮಾಡಬಹುದು. ಈ ದಿಸೆಯಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಯೋಗಾಭ್ಯಾಸಕ್ಕೆ ಮಹತ್ವ ಸ್ಥಾನ ನೀಡಲಾಗಿದೆ ಎಂದರು.
ಯೋಗ ಪಟು ಪ್ರಕಾಶ ಬಾಕಳೆ ಹಾಗೂ ಮೆಡಿಕಲ್ ಕಾಲೇಜಿನ ಯೋಗ ಶಿಕ್ಷಕ ಬಸನಗೌಡ ಪಾಟೀಲ ಯೋಗಾಭ್ಯಾಸ ಮಾಡಿಸಿದರು. ಈ ವೇಳೆ ಪ್ರಾಚಾರ್ಯ ಡಾ. ಎನ್.ಎಚ್. ಕುಲಕರ್ಣಿ, ವರ್ಧಮಾನ ಬಾಗಮಾರ, ಡಾ. ಕೆ.ಎಸ್. ಬೆಲ್ಲದ, ಡಾ. ಎಂ.ಬಿ. ಗುಗ್ಗರಿ, ಡಾ. ಸಿ.ಬಿ. ಇನಾಮದಾರ, ಡಾ. ಕಾಶೀನಾಥ ಬಡಿಗೇರ, ಎ.ಡಿ. ಕೋಲಕಾರ, ಈಶಣ್ಣ ಸಂಕನೂರ, ಮಂಜುನಾಥ ಸೂಡಿ ಮುಂತಾದವರಿದ್ದರು.