ವಿಜಯಸಾಕ್ಷಿ ಸುದ್ದಿ, ಗದಗ : ಮುಖ್ಯಮಂತ್ರಿ ಸಿದ್ದರಾಮಯಯ್ಯರ ತೇಜೋವಧೆ ಮಾಡುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಡೆಯನ್ನು ಖಂಡಿಸಿ ಸೋಮವಾರ ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಘಟಕದಿಂದ ನಗರದ ಟಿಪ್ಪು ಸುಲ್ತಾನ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಮಾತನಾಡಿ, 40 ವರ್ಷಗಳಿಂದ ರಾಜಕಾರಣದಲ್ಲಿ ಕಪ್ಪುಚುಕ್ಕೆ ಇಲ್ಲದೆ ಅಹಿಂದ ವರ್ಗ ಸೇರಿದಂತೆ ಎಲ್ಲ ವರ್ಗದವರ ಏಳ್ಗೆಗೆ ಶ್ರಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರ ಸಾಧನೆಯನ್ನು ಸಹಿಸದೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಷಡ್ಯಂತ್ರ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಎಚ್.ಡಿ. ದೇವೇಗೌಡ ಅವರ ಕುಟುಂಬದವರು ಜೈಲು ಕಂಡುಬಂದವರು. ಮುಖ್ಯಮಂತ್ರಿ ಸಿದ್ದರಾಮಯ್ಯರ ತೇಜೋವಧೆ ಮಾಡಲು ಪ್ರಯತ್ನಿಸಿದರೆ ಅಹಿಂದ ವರ್ಗದಿಂದ ಸೂಕ್ತ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೊನ್ನಪ್ಪ ಮಾತನಾಡಿ, ಮೈಸೂರಿನ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಅವರನ್ನು ಸಿಲುಕಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಕುತಂತ್ರ ಹೇಡಿತನದಿಂದ ಕೂಡಿದೆ. ಈ ಹಗರಣದ ಮೂಲಕ ರಾಜಕೀಯ ಕುತಂತ್ರ ನಡೆಸುತ್ತಿವೆ. ಅವರ ಪಕ್ಷದವರೇ ಆದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಕುಟುಂಬದ ಹಗರಣ ಬಗ್ಗೆ ಸದನದಲ್ಲಿಯೇ ಮಾತನಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದವರು ಯಾವುದೇ ಹಗರಣ ಮಾಡಿಲ್ಲ ಎಂದು ಹೇಳಿದರು.
ಮುಂಡರಗಿಯ ಮೋರನಾಳ ಮಾತನಾಡಿ, ಅಬ್ರಾಹಿಂ ಎಂಬ ವ್ಯಕ್ತಿ ಮುಡಾ ಹಗರಣ ಕುರಿತು ಸಲ್ಲಿಸಿದ ಮನವಿಗೆ ರಾಜ್ಯಪಾಲರು ಕೇವಲ ಎಂಟು ತಾಸಿನಲ್ಲಿಯೇ ಮುಖ್ಯಮಂತ್ರಿ ಅವರಿಗೆ ನೋಟಿಸ್ ನೀಡಿರುವದು ಆಶ್ಚರ್ಯವಾಗಿದೆ. ರಾಜ್ಯಪಾಲರು ಈ ಪ್ರಕರಣಕ್ಕೆ ಮಾತ್ರ ಆದ್ಯತೆ ನೀಡುತ್ತಿರುವುದು ನೋವಿನ ಸಂಗತಿ.
ಆದ್ದರಿಂದ ರಾಜ್ಯಪಾಲರು ಕೂಡಲೇ ನೋಟಿಸ್ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಚೆನ್ನಮ್ಮ ಹುಳುಕಣ್ಣವರ ಮಾತನಾಡಿ, ರಾಜ್ಯ ಕಂಡ ಅಪರೂಪ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮಾಡುವ ಆರೋಪಗಳು ಖಂಡನೀಯ. ರಾಜ್ಯಪಾಲರು ನೋಟಿಸ್ ಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ಹೇಮಂತ ಗಿಡ್ಡಹನುಮಣ್ಣವರ, ಶೇಖಣ್ಣ ಕಾಳೆ, ಹೊನ್ನಪ್ಪ ಪೋಟಿ, ರಮೇಶ ಹೊನ್ನಿನಾಯ್ಕರ, ಮೋಹನ ಇಮರಾಪೂರ, ನೀಲಪ್ಪ ಗುಡದಣ್ಣವರ, ಶರಣಪ್ಪ ಕುರಿ, ಕೆ.ಬಿ. ಕಂಬಳಿ, ಸುರೇಖಾ ಕುರಿ, ರೇಖಾ ಜಡಿಯವರ, ಭ್ಯಾಗ್ಯಶ್ರೀ, ಡಾ. ಎಂ.ಬಿ. ಮಡ್ಡಿ, ಉಮೇಶ ಅರಳಿ, ಕೃಷ್ಣಗೌಡ ಪಾಟೀಲ, ಎಸ್.ಎಸ್. ಕರಡಿ, ಕೆ.ಬಿ. ಕಂಬಳಿ, ನೀಲಪ್ಪ ಪಡಗೇರಿ, ಉಮೇಶ ರೊಳ್ಳಿ, ಮಲ್ಲಪ್ಪ ಕುರಡಗಿ, ಸುರೇಶ ತಳಹಳ್ಳಿ, ಬಸವರಾಜ ಉಮ್ಮಣ್ಣವರ, ಶಿವಕುಮಾರ ಹೈತಾಪೂರ ಮುಂತಾದವರು ಉಪಸ್ಥಿತರಿದ್ದರು.
ಯುವ ಮುಖಂಡ ಪ್ರಕಾಶ ಕರಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳ ಕುತಂತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರ ರಾಜಕೀಯ ಜೀವನಕ್ಕೆ ಕಪ್ಪುಚುಕ್ಕಿ ತರುವ ಪ್ರಯತ್ನ ನಡೆಯುತ್ತದೆ. ಸಿದ್ದರಾಮಯ್ಯರಿಗೆ ಅಹಿಂದ ವರ್ಗದವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಶಕ್ತಿ ತುಂಬುವ ಕೆಲಸ ಮಾಡಬೇಕು. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅಭಿವೃದ್ಧಿ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದರು.