ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಆಲಿ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಗರ್ ಸೋಪ್ ಜಾಹೀರಾತಿನಲ್ಲಿ ಲಕ್ಷ್ಮೀದೇವಿಗೆ ಸಂಬಂಧಿಸಿದ ಹಾಡನ್ನು ಬಳಸಿದ ಆರೋಪದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಇದೀಗ ನಟ ಆಲಿ ಕ್ಷಮೆ ಕೇಳಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಗರ್ ಸೋಪ್ ಜಾಹೀರಾತಿನಲ್ಲಿ ಆಲಿ, ಸೋಪಿಗೆ ಪೂಜೆ ಸಲ್ಲಿಸುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಲಕ್ಷ್ಮೀದೇವಿಯ ಕುರಿತ ಹಾಡನ್ನು ಬಳಸಲಾಗಿತ್ತು. ಇದನ್ನು ಕೆಲ ಹಿಂದೂಪರ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿವೆ.
ಈ ದೃಶ್ಯಕ್ಕೆ ಹಿನ್ನೆಲೆ ಕೂಡ ಇದೆ. ಆಲಿ ನಟಿಸಿದ್ದ ‘ದೇವುಡು ಚೇಸಿನ ಮನುಷುಲು’ ಸಿನಿಮಾದಲ್ಲಿ ಅವರು ಲಕ್ಷ್ಮೀದೇವಿಯ ಭಕ್ತನ ಪಾತ್ರ ಮಾಡಿದ್ದರು. ಆ ಚಿತ್ರದ ಜನಪ್ರಿಯ ಹಾಡು ಮತ್ತು ಸನ್ನಿವೇಶವನ್ನೇ ಜಾಹೀರಾತಿನಲ್ಲಿ ಮರುಸೃಷ್ಟಿ ಮಾಡಲಾಗಿತ್ತು. ಆದರೆ ದೇವಿಯ ಹಾಡನ್ನು ವಾಣಿಜ್ಯ ಜಾಹೀರಾತಿಗೆ ಬಳಸಿರುವುದು ವಿವಾದದ ಕಿಡಿ ಹಚ್ಚಿದೆ.
ವಿವಾದ ತೀವ್ರವಾಗುತ್ತಿದ್ದಂತೆ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಆಲಿ, ‘ಕಂಪೆನಿ ಹೇಳಿದಂತೆ ನನ್ನ ಹಳೆಯ ಸಿನಿಮಾದ ದೃಶ್ಯವನ್ನು ಸ್ವಲ್ಪ ಬದಲಾವಣೆ ಮಾಡಿ ಅಭಿನಯಿಸಿದ್ದೆ. ಆದರೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಕ್ಷಣ ಜಾಹೀರಾತನ್ನು ಡಿಲೀಟ್ ಮಾಡಿದ್ದೇವೆ. ಯಾರಿಗಾದರೂ ಇದರಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ಹೇಳಿದ್ದಾರೆ.
ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಜಾಹೀರಾತುಗಳಲ್ಲಿ ಧಾರ್ಮಿಕ ಅಂಶ ಬಳಕೆಯ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.



