ಬೆಳಗಾವಿ: ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಗುರುವಾರ ಸಂಜೆ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಹಠಾತ್ ಆರಂಭವಾದ ವರುಣಾರ್ಭಟಕ್ಕೆ ಗ್ರಾಮಸ್ಥರು ಕಂಗಾಲಾಗಿದ್ದು, ಹಲವು ಮನೆಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ.
ತೀವ್ರ ಗಾಳಿಯ ಪರಿಣಾಮ ಐದಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿದ್ದು, ಸುಮಾರು 200 ಅಡಿಯಷ್ಟು ದೂರಕ್ಕೆ ತಗಡಿನ ಶೀಟ್‌ಗಳು ಬಿದ್ದಿರುವುದು ಮಳೆಯ ರೌದ್ರತೆಗೆ ಸಾಕ್ಷಿಯಾಗಿದೆ. ಬಡ ಕುಟುಂಬಗಳು ತಾತ್ಕಾಲಿಕವಾಗಿ ಬೀದಿಗೆ ಬಿದ್ದ ಪರಿಸ್ಥಿತಿ ಉಂಟಾಗಿದೆ.
ಮನೆಯೊಳಗಿನ ದವಸ ಧಾನ್ಯಗಳು, ಬಟ್ಟೆ ಹಾಗೂ ಹಾಸಿಗೆಗಳು ನೀರಿನಿಂದ ಹಾನಿಯಾಗಿದ್ದು, ಮನೆಗಳ ಮೇಲೆ ಅಳವಡಿಸಿದ್ದ ಸೋಲಾರ್ ಪ್ಯಾನಲ್‌ಗಳು ಕೂಡ ಧರೆಗುರುಳಿವೆ. ದನದ ಕೊಟ್ಟಿಗೆಗಳು ನೆಲಸಮವಾಗಿರುವುದರಿಂದ ಗ್ರಾಮದಲ್ಲಿ ದನಸಂಪತ್ತಿಗೂ ಹಾನಿಯಾಗಿದೆ.
ವಿದ್ಯುತ್ ಕಂಬಗಳು ಹಾಗೂ ತೆಂಗಿನ ಮರಗಳು ಉರುಳಿ ಬಿದ್ದ ಪರಿಣಾಮ ಸಂಪೂರ್ಣ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜನರು ಪರದಾಡುವಂತಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಗ್ರಾಮಸ್ಥರು ಸರ್ಕಾರದಿಂದ ತಕ್ಷಣ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



