ವಿಜಯಸಾಕ್ಷಿ ಸುದ್ದಿ, ಗದಗ : ಉತ್ತರ ಕರ್ನಾಟಕ ಭಾಷಾ ಸೊಗಡಿನ `ಸೋಮು ಸೌಂಡ್ ಇಂಜಿನಿಯರ್’ ಚಿತ್ರ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಅಭಿ ಹೇಳಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಟಗರು ಮತ್ತು ಸಲಗ ಚಿತ್ರತಂಡದ ತಾಂತ್ರಿಕ ವರ್ಗ ಈ ಸಿನಿಮಾದಲ್ಲಿ ಕೆಲಸ ಮಾಡಿದೆ. ಚಿತ್ರ ಸಂಪೂರ್ಣವಾಗಿ ಉತ್ತರ ಕರ್ನಾಟಕ ಭಾಗದಲ್ಲಿ, ವಿಶೇಷವಾಗಿ ಕೂಡಲಸಂಗಮ, ಗುಂಜಿಹಾಳದಲ್ಲಿ ಚಿತ್ರೀಕರಣ ನಡೆದಿದೆ ಎಂದರು.
ಚಿತ್ರದ ನಾಯಕ, ನಾಯಕಿ ಹಾಗೂ ಇನ್ನುಳಿತ ಪಾತ್ರಗಳಲ್ಲಿ ಉತ್ತರ ಕರ್ನಾಟಕ ಭಾಗದವರೇ ಇದ್ದಾರೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಸಿನಿ ಪ್ರಿಯರು ಈ ಚಿತ್ರವನ್ನು ವೀಕ್ಷಿಸಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಭಾವನಾತ್ಮಕ ಸಂಬಂಧಗಳ ಹೊಯ್ದಾಟವನ್ನು ಹೊಂದಿರುವ ಕೌಟುಂಬಿಕ ಮನರಂಜನೆಯ ಸಿನಿಮಾ ಇದಾಗಿದೆ. ಶಾಂತಿಯ ಮೂಲವೇ ಕ್ಷಮೆ ಎನ್ನುವ ಸಂದೇಶವನ್ನು ಈ ಸಿನಿಮಾ ಹೊಂದಿದೆ. ಒಟ್ಟು ೨ ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಚಿತ್ರಕ್ಕೆ ಚರಣರಾಜ್ ಸಂಗೀತವಿದೆ. ಒಟ್ಟು 4 ಹಾಡುಗಳಿದ್ದು, 2 ಭಜನಾ ಪದಗಳಿವೆ. ಈಗಾಗಲೇ 2 ಹಾಡುಗಳು ಬಿಡುಗಡೆಯಾಗಿದ್ದು, ಜನಮನ ಸೆಳೆದಿವೆ. ಮಾಸ್ತಿ ಹಾಗೂ ನಾನು ಸಂಭಾಷಣೆ ಬರೆದಿದ್ದೆವೆ ಎಂದು ನಿರ್ದೇಶಕ ಅಭಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಕೃಷ್ಟಫರ್ ಕಿಣಿ, ಸಹ ನಿರ್ದೇಶಕ ನವೀನ, ಕಲಾವಿದರಾದ ಕಿರಣ ಅಣ್ಣಿಗೇರಿ, ಮಾರುತಿ ಈಳಿಗೇರ, ವಿನಾಯಕ ಬದಿ, ಕೃಷ್ಣ ಲಮಾಣಿ ಉಪಸ್ಥಿತರಿದ್ದರು.