ಬೆಂಗಳೂರು: ನೈರುತ್ಯ ರೈಲ್ವೆ ಇಲಾಖೆ ನಡೆಸುತ್ತಿರುವ ವಿವಿಧ ಹುದ್ದೆಗಳ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ನಿರ್ಧಾರಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ರೈಲ್ವೆ ಮಂಡಳಿ ಈ ಬಾರಿ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ನಡೆಸಲು ಮುಂದಾಗಿದ್ದು, ಕನ್ನಡ ಭಾಷೆಗೆ ಅವಕಾಶ ನಿರಾಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪರೀಕ್ಷೆಗಳು ಆಫೀಸ್ ಸೂಪರಿಂಟೆಂಡೆಂಟ್ (39 ಹುದ್ದೆ), ಸೀನಿಯರ್ ಕ್ಲರ್ಕ್ (25 ಹುದ್ದೆ) ಮತ್ತು ಇಂಟರ್ಮೀಡಿಯೆಟ್ ಅಪ್ರೆಂಟಿಸ್ ಮೆಕ್ಯಾನಿಕ್ಸ್ (9 ಹುದ್ದೆ) ಸೇರಿದಂತೆ ಒಟ್ಟು 73 ಹುದ್ದೆಗಳಿಗೆ ನಡೆಯುತ್ತಿದೆ.
ಈ ನಿರ್ಧಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು, “ತ್ರಿಭಾಷಾ ಸೂತ್ರದಡಿ ಕನ್ನಡಕ್ಕೂ ಅವಕಾಶ ನೀಡಬೇಕು. ತಕ್ಷಣ ಸುತ್ತೋಲೆ ಸರಿಪಡಿಸಿ ಕನ್ನಡದಲ್ಲಿ ಪರೀಕ್ಷೆ ನಡೆಸುವಂತೆ ಆದೇಶಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ವಿಷಯವನ್ನು ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಕೂಡ ಇದೇ ವಿಷಯದ ಕುರಿತು ನಡೆದ ಪ್ರತಿಭಟನೆ ವೇಳೆ ಪರೀಕ್ಷೆ ಮುಂದೂಡಲಾಗಿತ್ತು. ಆದರೆ ಇದೀಗ ಮತ್ತೆ ಅದೇ ವಿವಾದ ಪುನರಾವರ್ತನೆಯಾಗಿರುವುದರಿಂದ ಕನ್ನಡಪರ ಸಂಘಟನೆಗಳು ಉಗ್ರ ಹೋರಾಟದ ಎಚ್ಚರಿಕೆ ನೀಡಿವೆ.
ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ರೈಲ್ವೆ ಇಲಾಖೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದರ ಮೇಲೆ ರಾಜ್ಯದ ಗಮನ ಕೇಂದ್ರೀಕೃತವಾಗಿದೆ.



