ಲಾಸ್ ಏಂಜಲೀಸ್: 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ಪೇನ್ 1-0 ಗೋಲು ಅಂತರದಿಂದ ಪೋರ್ಚುಗಲ್ ತಂಡವನ್ನು ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ. ಈ ಸೋಲಿನೊಂದಿಗೆ ಪೋರ್ಚುಗಲ್‌ನ ವಿಶ್ವಕಪ್ ಅಭಿಯಾನ ಅಂತ್ಯಗೊಂಡಿದ್ದು, ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೋ ಅವರ ವಿಶ್ವಕಪ್ ಗೆಲ್ಲುವ ಕನಸಿಗೂ ತೆರೆ ಬಿದ್ದಿದೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮೊದಲಾರ್ಧ ಹಾಗೂ ಬಹುತೇಕ ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದವು. ಆದರೆ ದ್ವಿತೀಯಾರ್ಧದ ಇಂಜುರಿ ಸಮಯದ (90+1ನೇ ನಿಮಿಷ) ವೇಳೆ ಬದಲಿ ಆಟಗಾರನಾಗಿ ಕಣಕ್ಕಿಳಿದ ಮೈಕೆಲ್ ಮೆರಿನೊ ನಿರ್ಣಾಯಕ ಗೋಲು ದಾಖಲಿಸಿ ಸ್ಪೇನ್‌ಗೆ ಅಮೋಘ ಜಯ ತಂದುಕೊಟ್ಟರು.
2010ರ ವಿಶ್ವಕಪ್ ಚಾಂಪಿಯನ್ ಸ್ಪೇನ್ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದು, ಈ ಗೆಲುವಿನೊಂದಿಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಸತತ ಆರು ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಡದ ಮೊದಲ ತಂಡ ಎಂಬ ಅಪರೂಪದ ಸಾಧನೆಯನ್ನೂ ತನ್ನದಾಗಿಸಿಕೊಂಡಿದೆ.
ಪಂದ್ಯದ ಪ್ರಮುಖ ಆಕರ್ಷಣೆಯಾಗಿ ಪೋರ್ಚುಗಲ್‌ನ ಅನುಭವಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೋ ಹಾಗೂ ಸ್ಪೇನ್‌ನ ಯುವ ಪ್ರತಿಭೆ 18 ವರ್ಷದ ಲಮೈನ್ ಯಮಾಲ್ ಗಮನ ಸೆಳೆದಿದ್ದರು. ಆದರೆ ಪೋರ್ಚುಗಲ್‌ಗೆ ಗೆಲುವು ತಂದುಕೊಡುವಲ್ಲಿ ರೊನಾಲ್ಡೋ ವಿಫಲರಾದರು.
ಸೋಲಿನ ಬಳಿಕ ಮೈದಾನದಲ್ಲೇ ಭಾವುಕರಾದ ರೊನಾಲ್ಡೋ ಕಣ್ಣೀರು ಹಾಕಿದ ದೃಶ್ಯ ಅಭಿಮಾನಿಗಳ ಮನಕಲಕಿತು. ಒಂದು ಕಡೆ ಸ್ಪೇನ್ ಆಟಗಾರರು ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಮತ್ತೊಂದೆಡೆ ರೊನಾಲ್ಡೋ ಅವರ ವಿಶ್ವಕಪ್ ಪಯಣ ನಿರಾಸೆಯೊಂದಿಗೆ ಅಂತ್ಯಗೊಂಡಿತು.
ಇತ್ತೀಚೆಗೆ ರೊನಾಲ್ಡೋ ಅವರ ಸಹೋದರಿ, ಇದು ಅವರ ಕೊನೆಯ ವಿಶ್ವಕಪ್ ಆಗಿರಬಹುದು ಎಂಬ ಸುಳಿವು ನೀಡಿದ್ದರು. ಆದರೆ ರೊನಾಲ್ಡೋ ಮಾತ್ರ ನಿವೃತ್ತಿ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೂ ಈ ವಿಶ್ವಕಪ್‌ನಿಂದ ಪೋರ್ಚುಗಲ್ ಹೊರಬಿದ್ದಿರುವುದರಿಂದ, ಅವರ ಮುಂದಿನ ಅಂತರರಾಷ್ಟ್ರೀಯ ಭವಿಷ್ಯದ ಬಗ್ಗೆ ಮತ್ತೆ ಚರ್ಚೆಗಳು ಆರಂಭವಾಗಿವೆ.



