ಮಂಡ್ಯ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶ್ರೀರಂಗಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ ಈ ವರ್ಷವೂ ಭಕ್ತಾದಿಗಳಿಗೆ ವಿಶೇಷ ಧನಲಕ್ಷ್ಮಿ ಅಲಂಕಾರದ ದರ್ಶನವನ್ನು ಏರ್ಪಡಿಸಲಾಗಿದೆ. ದೇವಿಗೆ ವಿವಿಧ ಮುಖಬೆಲೆಯ ನೋಟುಗಳನ್ನು ಬಳಸಿ ಅಲಂಕಾರ ಮಾಡಲಾಗಿದ್ದು, ಇದು ಭಕ್ತರ ಗಮನ ಸೆಳೆದಿದೆ.
ದೇವಾಲಯಕ್ಕೆ ಭಕ್ತಾದಿಗಳಿಂದ ಹರಿದು ಬಂದ ₹10, ₹20, ₹50, ₹100, ₹200 ಮತ್ತು ₹500 ನೋಟುಗಳನ್ನು ಸಂಗ್ರಹಿಸಿ, ಸುಮಾರು ₹3 ಲಕ್ಷ ಮೌಲ್ಯದ ಧನಲಕ್ಷ್ಮಿ ಅಲಂಕಾರವನ್ನು ಕೈಗೊಳ್ಳಲಾಗಿದೆ.
ದೇವಾಲಯದ ಪ್ರಧಾನ ಅರ್ಚಕರಾದ ಲಕ್ಷ್ಮೀಶ್ ಶರ್ಮ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ವರಮಹಾಲಕ್ಷ್ಮಿ ಹಬ್ಬದ ದಿನದಂದು ದೇವಿಗೆ ಈ ಅಲಂಕಾರ ಮಾಡಲಾಗಿದೆ ಎಂದು ತಿಳಿಸಿದರು. ಈ ಅಲಂಕಾರದ ಮೂಲಕ ಎಲ್ಲರಿಗೂ ಶುಭವಾಗಲಿ, ಕಾಲಕಾಲಕ್ಕೆ ಮಳೆಯಾಗಿ ದೇಶ ಸಮೃದ್ಧಿ ಹೊಂದಲಿ ಹಾಗೂ ತಾಯಿಯನ್ನು ಪೂಜಿಸುವ ಪ್ರತಿಯೊಬ್ಬ ಭಕ್ತನಿಗೂ ಭಗವಂತ ಒಳಿತನ್ನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದರು.



