ಕಾರವಾರ: ದಾಂಡೇಲಿ ತಾಲೂಕಿನ ಕರ್ಕಾ ಕ್ರಾಸ್ ಸಮೀಪದ ಅಜಗಾಂವ ಬಳಿ ಅತೀವೇಗದ ಚಾಲನೆಯಿಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಈ ಅಪಘಾತದಲ್ಲಿ ಧಾರವಾಡದ ಫಾರೂಖ್ ಸಾಬ್ ಹಾಗೂ ಹಳಿಯಾಳದ ಮುದಸ್ಸಿರ್ ಇಸ್ಮಾಯಿಲ್ ಮುಲ್ಲಾ ಮೃತ ಪಟ್ಟಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಾಂಡೇಲಿಯಿಂದ ಹಳಿಯಾಳ ಕಡೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಕಾರು ಎರಡು ಮರಗಳ ನಡುವೆ ಸಿಲುಕಿಕೊಂಡಿದೆ.
ಮೃತದೇಹಗಳನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ದಾಂಡೇಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



