ವ್ಯಕ್ತಿ ತನ್ನ ಜೀವನದ ಹಾದಿಯಲ್ಲಿ ಉತ್ತಮ ವಿಚಾರ ಮತ್ತು ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಎಂತಹ ಸಾಧನೆಯನ್ನು ಬೇಕಾದರೂ ಮಾಡಬಲ್ಲ. ನಿರಂತರ ಕ್ರಿಯಾಶೀಲತೆ, ದೂರದೃಷ್ಟಿ, ಮನದ ಸಂಕಲ್ಪ, ನಿಶ್ಚಿತ ದಾರಿ, ಪ್ರಯೋಗಾತ್ಮಕ ಒಲವು-ನಿಲುವುಗಳನ್ನು ಹೊಂದಿದ್ದರೆ ಸಾಧಕರ ಸರದಿಯಲ್ಲಿ ನಿಲ್ಲಬಲ್ಲ. ಸೂಚ್ಯ ಕಾರ್ಯ ಯೋಜನೆಗಳ ಮುಖಾಂತರ ಬೆಳೆದು ಬೆಳಗಬಲ್ಲ. ಇಂತಹ ಅಪರೂಪದ ಗುಣ ಮೌಲ್ಯಗಳನ್ನು ಹೊಂದಿದವರು ವಿರಳ. ವಿರಳರಲ್ಲಿಯೇ ಸರಳರಾಗಿದ್ದುಕೊಂಡು ಸದ್ದಿಲ್ಲದೆಯೇ ಸಾಧನೆಯ ಹಾದಿ ಹಿಡಿದುವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಕವಿತಾಳದ ಡಾ. ಕವಿತಾ ಮಿಶ್ರಾ ಅವರು ನಮ್ಮ ಮಣ್ಣಿನ ಹೆಮ್ಮೆಯ ಮಗಳು.
ಮಹಿಳೆ ಅಬಲೆಯಲ್ಲ, ಸಬಲೆ ಎಂಬುದಕ್ಕೆ ಅಕ್ಷರಶಃ ಪ್ರತಿರೂಪದಂತಿರುವ ಕವಿತಾ ಮಿಶ್ರಾರವರು ಕೃಷಿ ಕ್ಷೇತ್ರದಲ್ಲಿ ಸತತವಾಗಿ ಮಾಡಿಕೊಂಡು ಬಂದಿರುವ ಕಾರ್ಯ ಯೋಜನೆಗಳೇ ಅವರ ಸಾಧನೆಯನ್ನು ತಿಳಿಸುತ್ತವೆ. ಧಾರವಾಡದ ಅಗ್ನಿಹೋತ್ರಿ ಮನೆತನದ ಹೆಸರಾಂತ ಉದ್ಯಮಿಗಳಾದ ಪ್ರಕಾಶ ಮತ್ತು ಗಂಗೂಬಾಯಿ ಅವರ ಸುಪುತ್ರಿಯಾಗಿ 16-02-1977ರಂದು ಜನಿಸಿದ ಇವರು ಬಾಲ್ಯದಲ್ಲಿಯೇ ಮಾತಾ-ಪಿತರಿಂದ ಉತ್ತಮ ಸಂಸ್ಕಾರ ಪಡೆದು ಬೆಳೆದವರು. ಕವಿತಾ ಮಿಶ್ರಾರವರು ಧಾರವಾಡದ ಪ್ರೆಸೆಂಟೇಷನ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿದರು. ಮುಂದೆ ಕಿಟೆಲ್ ಕಾಲೇಜಿನಲ್ಲಿ ಪಿಯು ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರು.
ಆಧುನಿಕ ತಂತ್ರಜ್ಞಾನ ಶಿಕ್ಷಣದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು 1996ರಲ್ಲಿ ಗಣಕಯಂತ್ರ ವಿಷಯದ ಮೇಲೆ ಹುಬ್ಬಳ್ಳಿಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಅಲ್ಲದೇ ಮನೋವಿಜ್ಞಾನ ವಿಷಯದ ಮೇಲೆ ಕವಿವಿಯಿಂದ ಎಂ.ಎ.ಪದವಿಯನ್ನೂ ಸಹ ತಮ್ಮದಾಗಿಸಿಕೊಂಡವರು. ಇದೇ ಸಂದರ್ಭದಲ್ಲಿ ಇವರಿಗೆ ರಾಯಚೂರು ಜಿಲ್ಲೆಯ ಕವಿತಾಳದ ಆರೋಗ್ಯ ಇಲಾಖೆಯ ಅಧಿಕಾರಿಗಳಾಗಿದ್ದ ಉಮಾಶಂಕರ ಮಿಶ್ರಾ ಅವರೊಂದಿಗೆ ವಿವಾಹ ನಿಶ್ಚಯವಾಯಿತು.
ಕಲಿಕಾಸಕ್ತಿ, ಸಂಶೋಧನೆಗಳ ಮೇಲೆ ಪ್ರೌಢಿಮೆ ಹೊಂದಿದವರಾಗಿ ಕೆಲವು ವರ್ಷಗಳ ಕಾಲ ವಿವಿಧೆಡೆಗಳಲ್ಲಿ ತಾಂತ್ರಿಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಕಾರ್ಯ ನಿರ್ವಹಿಸಿ ಅಲ್ಲಿಯೂ ಯಶಸ್ವಿಯಾದರು. ಆಧುನಿಕ ವೃತ್ತಿಯ ಪರಿಸರ ಅಷ್ಟೇನೂ ಒಗ್ಗದ ಕಾರಣ ಕವಿತಾ ಮಿಶ್ರಾ ಅವರು ಖಾಸಗಿ ಐಟಿ ಕಂಪನಿಗಳ ವ್ಯಾಪ್ತಿಯಿಂದ ಹೊರ ಬಂದು ಭೂತಾಯಿಯ ಸೇವೆ ಮಾಡುವ ಸಂಕಲ್ಪ ಮಾಡಿ ಕಾರ್ಯಾರಂಭ ಮಾಡಿದರು.
ಮನೆತನದ ಪರಿಸ್ಥಿತಿಯನ್ನರಿತು ಪತಿಯ ಪ್ರೇರಣೆಯಿಂದ ತಮ್ಮ 8 ಎಕರೆ ಬಂಜರು ಭೂಮಿಯಲ್ಲಿ ಉಳುಮೆ ಆರಂಭಿಸಿದರು. ಮೌಸ್-ಕೀಬೋರ್ಡ್ ಬಳಸಿ ಕಾರ್ಯ ನಿರ್ವಹಿಸಿದ್ದ ಇವರು ಕುಂಟೆ-ರಂಟೆಗಳ ಜೊತೆಗೂಡಿ ಜಮೀನು ಹಸನು ಮಾಡುವ ಸಂದರ್ಭದಲ್ಲಿ ಬಹಳವೇ ಕಷ್ಟಪಟ್ಟರು. ಬಂಜರು ಭೂಮಿಗೆ ಹೊಸ ಆಯಾಮವನ್ನು ತಂದಿಟ್ಟರು. ಆರಂಭದಲ್ಲಿ ದಾಳಿಂಬೆ ಸಸಿಗಳನ್ನು ನೆಟ್ಟರು. ಭೂಮಿಯ ಪರಿಸರ ಮತ್ತು ನೀರಿನ ಕೊರತೆಯಿಂದಾಗಿ ದಾಳಿಂಬೆ ಬೆಳೆ ಉತ್ತಮವಾಗಿ ಬೆಳೆದಿದ್ದರೂ ಸಹ ಅಕಾಲಿಕ ರೋಗದಿಂದ ಬೆಳೆ ಸಂಪೂರ್ಣವಾಗಿ ನಾಶ ಹೊಂದುವಂತಾಯಿತು. ಏನೇ ಆದರೂ ಪಟ್ಟು ಬಿಡದ ಮಿಶ್ರಾ ಅವರು ಮತ್ತೆ ಕಾರ್ಯಾರಂಭ ಮಾಡಿ ಕೊಳವೆ ಬಾವಿ ಕೊರೆಯಿಸಿ, ನೀರಾವರಿ ಮೂಲಕ ದಾಳಿಂಬೆ ಫಸಲನ್ನು ಅತ್ಯುತ್ತಮವಾಗಿ ಪಡೆದರು. ಇದೇ ಸಂದರ್ಭದಲ್ಲಿ ಕೃಷಿ ಭೂಮಿಗೆ ನವ್ಯ ಮಾದರಿಯ ತಾಂತ್ರಿಕ ಚಿಕಿತ್ಸೆಯಿಂದ ಫಲವತ್ತತೆಯನ್ನು ಹೆಚ್ಚಿಸಿದರು.
2008ರಲ್ಲಿ ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಶ್ರೀಗಂಧದ ಬಗ್ಗೆ ವಿವಿಧ ಭಾಗಗಳಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಹೆಚ್ಚಿನ ವಿಷಯ ಪಡೆದು, ಸರಳವಾಗಿ ಮತ್ತು ಕೀಟನಾಶಕ ಮುಕ್ತವಾಗಿ ಶ್ರೀಗಂಧದ ಸಸಿಗಳನ್ನು ನೆಟ್ಟು ಹೆಮ್ಮರವಾಗಿ ಬೆಳೆಯುವಂತೆ ಮಾಡಿದರು. ಬೆಳೆದು ನಿಂತ ಮರಗಳಿಗೆ ಮೈಕ್ರೋಚಿಪ್‌ಗಳನ್ನು ಅಳವಡಿಸಿದ್ದಲ್ಲದೇ ಸಿಸಿ ಕ್ಯಾಮರಾ ಕಣ್ಗಾವಲಿನೊಂದಿಗೆ ಕೃಷಿಗೆ ತಾಂತ್ರಿಕ ಸ್ಪರ್ಶ ನೀಡಿದರು. 8 ವಿಭಿನ್ನ ಜಾತಿಯ ನಾಯಿಗಳಿಗೆ ತರಬೇತಿ ನೀಡಿ ಕಾವಲು ಪಡೆಯನ್ನು ಗಟ್ಟಿಗೊಳಿಸಿದ ಗಟ್ಟಿಗಿತ್ತಿ ಕವಿತಾ ಅವರು ಶ್ರೀಗಂಧದ ಫಸಲನ್ನು ಹೆಚ್ಚುವರಿಯಾಗಿ ಪಡೆದುಕೊಂಡರು.
ಸಧ್ಯ 2100 ಶ್ರೀಗಂಧ, 1500 ದಾಳಿಂಬೆ, 90 ಮಾವು, 300 ನಿಂಬೆ, 800 ಪೇರಲ, 150 ನೆಲ್ಲಿಕಾಯಿ, 100 ತೆಂಗು, 100 ಸೀತಾಫಲ, 150 ನುಗ್ಗೆ, 150 ಕರಿಬೇವು, 100 ಮಲ್ಲಿಗೆ ಸೇರಿದಂತೆ ಹಲವು ವಿಶಿಷ್ಠ ಜಾತಿಯ ಸಸಿಗಳನ್ನು, ಗಿಡಗಳನ್ನು, ಮರಗಳನ್ನು ಜಮೀನಿನಲ್ಲಿ ಹೊಂದಿದ್ದಾರೆ. ಇವುಗಳಿಂದ ಸಮೃದ್ಧ ಫಲವನ್ನು ಪಡೆಯುತ್ತಿದ್ದಾರೆ. ಅಲ್ಲದೇ ಸಿಹಿನಿಂಬೆ, ಸಪೋಟ, ಬಾಳೆ, ಕಾಫಿ, ಮೆಣಸು, ಅರಿಷಿಣದಂತಹ ಬೆಳೆಗಳನ್ನು ಬೆಳೆದು ಬಹುತೇಕ ಜಮೀನಿನ ತುಂಬೆಲ್ಲ ಹಸಿರು ರಾರಾಜಿಸುವಂತೆ ಮಾಡಿದ್ದಾರೆ.
ದಿನದ ಅಷ್ಟೂ ವೇಳೆಯನ್ನು ವ್ಯವಸಾಯಕ್ಕೆ ಮೀಸಲಿಟ್ಟಿರುವ ಕವಿತಾ ಮಿಶ್ರಾ ಅವರು ಕೃಷಿ ಕಾರ್ಯಕ್ಕೆ ಪರ್ಯಾಯವಾಗಿ ಜೇನುಹುಳು, ಎರೆಹುಳು, ಕುರಿ ಸಾಕಾಣಿಕೆ, ದೇಶಿಹಸುಗಳ ಸಾಕಾಣಿಕೆ, ಗೀರ್ ಹಸುಗಳ ಪೋಷಣೆಯೊಂದಿಗೆ ಮೀನುಗಾರಿಕೆಯಲ್ಲೂ ಮೇಲುಗೈ ಸಾಧಿಸಿದವರು. ಬೆಂಗಳೂರಿನ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ ಲಿಮಿಟೆಡ್ ನೊಂದಿಗೆ ಒಪ್ಪಂದ ಮಾಡಿಕೊಂಡು ಶ್ರೀಗಂಧ ಹಾಗೂ ಕೆಂಪು ಶ್ರೀಗಂಧದ ಮರಗಳನ್ನು ಪೂರೈಸುವವರಾಗಿದ್ದಾರೆ. ಇಂದಿಗೂ ಸಬಲ-ಸಮೃದ್ಧ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡು ಸಾಂಪ್ರದಾಯಿಕ ಬೇಸಾಯಕ್ಕೆ ಆಧುನಿಕತೆಯ ತಾಂತ್ರಿಕ ಸ್ಪರ್ಶ ನೀಡಿ ಹೆಮ್ಮರವಾಗಿ ಬೆಳೆದಿರುವ ಕೃಷಿ ಮಾತೆ ಕವಿತಾ ಮಿಶ್ರಾ.
ಆಧುನಿಕ ಯುಗದ ಭರದಲ್ಲಿಯೂ ಸಾಂಪ್ರದಾಯಿಕ ಕೃಷಿಯ ಮೂಲಕ ತೋಟಗಾರಿಕೆ, ಅರಣ್ಯ ಮತ್ತು ಪಶು ಸಂಗೋಪನೆಯನ್ನು ಒಗ್ಗೂಡಿಸಿಕೊಂಡು ಸಮಗ್ರಯುತ ಕೃಷಿಗೆ ತಮ್ಮನ್ನು ತಾವು ಅರ್ಪಿಸಿಕೊಂಡು ಗಣನೀಯ ಪ್ರಮಾಣದ ಕೊಡುಗೆಯಿತ್ತು ಮುನ್ನಡೆಯುತ್ತಿರುವ ಇವರ ಯಶೋಗಾಥೆಗೆ ಸಾಕ್ಷಿ ಎಂಬಂತೆ ಅನೇಕ ಸಂಘ-ಸಂಸ್ಥೆಗಳು, ಮಠ-ಮಾನ್ಯಗಳು, ವಿಶ್ವವಿದ್ಯಾಲಯಗಳು, ದೇಶಮಟ್ಟದ ವಿವಿಧ ಸಂಘಟನೆಗಳು, ಸರ್ಕಾರ ಮಟ್ಟದ ಹಲವಾರು ಪದವಿ-ಪ್ರಶಸ್ತಿ-ಪುರಸ್ಕಾರಗಳು ಅರಸಿ ಬಂದು ಇವರ ಒಡಲು ತುಂಬಿವೆ. ಇತ್ತೀಚಿಗೆ ವಿಜಯನಗರ ಜಿಲ್ಲೆಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯವು ಇವರು ಮಾಡಿದ ಕೃಷಿ ಸಾಧನೆಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಮತ್ತಷ್ಟು ಕಾರ್ಯೋತ್ಸಾಹವನ್ನು ಹೆಚ್ಚಿಸಿದೆ.
ಹಸಿರನ್ನು ಉಸಿರಾಗಿಸಿಕೊಂಡು ಮುನ್ನಡೆಯುವಲ್ಲಿ ಸದಾ ಸಕ್ರಿಯರಾದ ಡಾ. ಕವಿತಾ ಮಿಶ್ರಾ ಅವರಿಗೆ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಮಾರ್ಚ್ 12ರಂದು ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಪಾಲ್ಗೊಳ್ಳುವ ನಾಡಿನ ವಿವಿಧ ಶ್ರೀಗಳವರ ಹಾಗೂ ಗಣ್ಯ ಮಾನ್ಯರ ಸಮ್ಮುಖದಲ್ಲಿ ಜರುಗುವ ಯುಗಾವತಾರಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಮತ್ತು ಶಿವಾದ್ವೈತ ಸಮಾವೇಶದ ಸುಸಂದರ್ಭದಲ್ಲಿ 1 ಲಕ್ಷ ರೂ. ನಗದು ಬಹುಮಾನ, ಕಂಚಿನ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುವ 2025ನೇ ಸಾಲಿನ ಶ್ರೀಪೀಠದ ಅತ್ಯುನ್ನತ `ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ‘ಯನ್ನು ಅನುಗ್ರಹಿಸಲಾಗುವುದು.
– ಡಾ. ಗುರುಪಾದಯ್ಯ ವೀ. ಸಾಲಿಮಠ.
ಸವಣೂರು.