ಬೆಂಗಳೂರು/ಮೈಸೂರು: ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮೈಸೂರು ಪ್ರವಾಸ ಕೈಗೊಂಡಿರುವ ಡಿ.ಕೆ. ಶಿವಕುಮಾರ್ ಅವರ ಆಗಮನವನ್ನು ಕಾಂಗ್ರೆಸ್ ಐತಿಹಾಸಿಕ ಕಾರ್ಯಕ್ರಮವನ್ನಾಗಿ ರೂಪಿಸಿದೆ. ಕಾರಂಜಿ ಕೆರೆ ವೃತ್ತದಿಂದ ಕುರುಬಾರಹಳ್ಳಿ ವೃತ್ತದವರೆಗೆ ನಡೆಯಲಿರುವ ಭವ್ಯ ಮೆರವಣಿಗೆಯ ಮೂಲಕ ಪಕ್ಷದ ಸಂಘಟನಾ ಬಲ ಪ್ರದರ್ಶಿಸಲು ನಾಯಕರು ಮುಂದಾಗಿದ್ದಾರೆ.
ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿದ್ದು, ರಸ್ತೆ ಬದಿಯಲ್ಲಿ ಮರದ ಬ್ಯಾರಿಕೇಡ್ಗಳನ್ನು ಅಳವಡಿಸಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ನಗರದ ಪ್ರಮುಖ ಭಾಗಗಳಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬೃಹತ್ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದ್ದು, ಕಾರ್ಯಕರ್ತರು ಸಂಭ್ರಮದ ವಾತಾವರಣ ನಿರ್ಮಿಸಿದ್ದಾರೆ.
ಮುಖ್ಯಮಂತ್ರಿಗೆ ಕ್ರೇನ್ ಮೂಲಕ ವಿಶೇಷ ಹಾರ ಹಾಕಿ ಸ್ವಾಗತಿಸುವ ಕಾರ್ಯಕ್ರಮ ರೂಪಿಸಲಾಗಿದೆ. ವೀಳ್ಯದ ಎಲೆ, ಮಲ್ಲಿಗೆ ಹಾಗೂ ತಾವರೆ ಹೂಗಳಿಂದ ತಯಾರಿಸಲಾದ ಬೃಹತ್ ಹಾರ ಈ ಸ್ವಾಗತದ ಪ್ರಮುಖ ಆಕರ್ಷಣೆಯಾಗಲಿದೆ.
ಮೆರವಣಿಗೆ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.



