ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವ ಕೌಟುಂಬಿಕ ದುರಂತ ನಡೆದಿದೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೃತರನ್ನು ಹರೀಶ್ (49), ಪತ್ನಿ ನಿಶ್ಚಿತ (36) ಹಾಗೂ ಅವರ 13 ಮತ್ತು 6 ವರ್ಷದ ಇಬ್ಬರು ಮಕ್ಕಳೆಂದು ಗುರುತಿಸಲಾಗಿದೆ. ಹರೀಶ್ ಮೊದಲು ಪತ್ನಿ ಮತ್ತು ಮಕ್ಕಳ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣಕ್ಕೆ ಮತ್ತಷ್ಟು ನಿಗೂಢತೆ ಮೂಡಿಸಿರುವ ಸಂಗತಿ ಎಂದರೆ, ಘಟನೆಗೆ ಮೂರು ದಿನಗಳ ಮುನ್ನವೇ ಹರೀಶ್ ತನ್ನ ತಾಯಿಯನ್ನು ಅಜ್ಜಿ ಮನೆಗೆ ಕಳುಹಿಸಿದ್ದ ಎನ್ನಲಾಗಿದೆ. ಸೋಮವಾರ ರಾತ್ರಿ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಮಂಗಳವಾರ ಬೆಳಗ್ಗೆ ಮನೆ ಬಾಗಿಲು ತೆರೆಯದಿದ್ದಾಗ ನೆರೆಹೊರೆಯವರು ಕಿಟಕಿಯಿಂದ ನೋಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಹುಣಸೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೌಟುಂಬಿಕ ಕಲಹ, ಆರ್ಥಿಕ ಸಮಸ್ಯೆ ಅಥವಾ ಇತರೆ ಯಾವುದೇ ಕಾರಣ ಈ ದುರಂತಕ್ಕೆ ಕಾರಣವಾಗಿದೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.



