ಮೈಸೂರು: ಮೈಸೂರು ದಸರಾ ಮಹೋತ್ಸವ-2026 ಈ ಬಾರಿ ಮತ್ತಷ್ಟು ವೈಭವ ಪಡೆದುಕೊಳ್ಳುವ ಸಾಧ್ಯತೆ ಇದೆ. ನಾಡಹಬ್ಬದ ಅಂಗವಾಗಿ ಕಂಬಳ ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಕಂಬಳಕ್ಕಾಗಿ ಈಗಾಗಲೇ ಸ್ಥಳ ಗುರುತಿಸಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ವೀರನಹೊಸಹಳ್ಳಿಯಲ್ಲಿ ದಸರಾ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ದಸರಾ ಸಂದರ್ಭದಲ್ಲಿ ಕಂಬಳ ನಡೆಸುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಹೀಗಾಗಿ ಈ ಬಾರಿಯ ದಸರಾ ಕಾರ್ಯಕ್ರಮಗಳ ಪಟ್ಟಿಯಲ್ಲಿ ಕಂಬಳ ಪ್ರಮುಖ ಆಕರ್ಷಣೆಯಾಗಲಿದೆ. ಗುರುತಿಸಲಾಗಿರುವ ಸ್ಥಳದಲ್ಲೇ ಕಂಬಳ ಆಯೋಜಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇತ್ತ ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿರುವ ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆ ಇನ್ನೂ ಬಾಕಿಯಿದೆ. ಗಜಪಡೆ ತಾಲೀಮು ನಡೆಸಿದ ಬಳಿಕ ಅಂಬಾರಿ ಆನೆಯನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇಂದಿನಿಂದ ಗಜಪಯಣ ಆರಂಭವಾಗಿದ್ದು, ವೀರನಹೊಸಹಳ್ಳಿಯಲ್ಲಿ ದಸರಾ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
25 ವರ್ಷಗಳ ಸೇವೆ ಬಳಿಕ ಅಭಿಮನ್ಯುವಿಗೆ ವಿದಾಯ
ದಸರಾ ಗಜಪಡೆಯ ಹಿರಿಯ ಆನೆ ಅಭಿಮನ್ಯು ಈ ಬಾರಿ ನಿವೃತ್ತಿಯಾಗಿರುವುದು ಗಜಪಯಣದ ಪ್ರಮುಖ ಬೆಳವಣಿಗೆಯಾಗಿದೆ. ಬರೋಬ್ಬರಿ 25 ವರ್ಷಗಳ ಕಾಲ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಅಭಿಮನ್ಯು ಆರು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದಾನೆ.
ನಿವೃತ್ತಿ ಹಿನ್ನೆಲೆಯಲ್ಲಿ ಅಭಿಮನ್ಯುವಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಗಿದೆ. ಆದರೆ ಅಭಿಮನ್ಯುವನ್ನು ಸಂಪೂರ್ಣವಾಗಿ ದಸರಾ ಆಚರಣೆಯಿಂದ ದೂರ ಇಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಿಶಾನೆ ಆನೆಯಾಗಿ ಅಭಿಮನ್ಯುವನ್ನು ಕರೆತರುವ ಕುರಿತು ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.



