ಮೈಸೂರು: ಕೆಲಸದ ಸ್ಥಳದಲ್ಲಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿನಕಲ್ನಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ನಾಗೇಶ್ವರಿ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ನೋಟ್ನಲ್ಲಿ ಕಂಪನಿಯ ಲೇಡಿ ಸೂಪರ್ವೈಸರ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ.
ಖಾಸಗಿ ಕಂಪನಿಯಲ್ಲಿ ಪ್ರಮೋಟರ್ ಆಗಿದ್ದ ನಾಗೇಶ್ವರಿ, ನಾಲ್ಕು ದಿನಗಳ ಹಿಂದೆ ‘ಡಾಲಿ’ ಎಂಬ ಮಹಿಳೆ ಸೂಪರ್ವೈಸರ್ ಆಗಿ ಬಂದ ಬಳಿಕ ತಮ್ಮ ಮೇಲೆ ಕಿರುಕುಳ ಹೆಚ್ಚಾಯಿತು ಎಂದು ಡೆತ್ನೋಟ್ನಲ್ಲಿ ಆರೋಪಿಸಿದ್ದಾರೆ. ತನ್ನದಲ್ಲದ ತಪ್ಪುಗಳಿಗೂ ತಮ್ಮನ್ನೇ ಹೊಣೆ ಮಾಡಿ ಟಾರ್ಗೆಟ್ ಮಾಡಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಒಂದು ದಿನವೂ ವೀಕ್ಆಫ್ ನೀಡಿರಲಿಲ್ಲ. ತುರ್ತು ಸಂದರ್ಭದಲ್ಲೂ ರಜೆ ಕೇಳಿದರೂ ಅವಕಾಶ ನೀಡಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದ ಬಳಿಕ ತಮ್ಮನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ವಜಾಗೊಳಿಸಿದ ನಂತರ ನೋಟಿಸ್ ಪಿರಿಯಡ್ ಕೂಡ ಮಾಡಿಸಿರಲಿಲ್ಲ ಎಂದು ನಾಗೇಶ್ವರಿ ಆರೋಪಿಸಿದ್ದಾರೆ.
‘ಡಾಲಿ ಮೇಡಂ ನೀಡಿದ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನ್ಯಾಯ ಕೊಡಿಸಿ’ ಎಂದು ಡೆತ್ನೋಟ್ನಲ್ಲಿ ಮನವಿ ಮಾಡಿರುವುದಾಗಿ ತಿಳಿದುಬಂದಿದೆ.
ಘಟನೆ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಾಗೇಶ್ವರಿಯ ಡೆತ್ನೋಟ್ ಅನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿ, ಅದರಲ್ಲಿರುವ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ.
ಕೆಲಸದ ಒತ್ತಡ, ವೃತ್ತಿಪರ ಸಮಸ್ಯೆಗಳು ಅಥವಾ ಸೂಪರ್ವೈಸರ್ನಿಂದ ಆಗಿದೆ ಎನ್ನಲಾದ ಕಿರುಕುಳ—ನಾಗೇಶ್ವರಿಯ ಆತ್ಮಹತ್ಯೆಗೆ ನಿಖರ ಕಾರಣ ಯಾವುದು ಎಂಬುದು ತನಿಖೆಯಿಂದ ಹೊರಬರಬೇಕಿದೆ. ಡೆತ್ನೋಟ್ನಲ್ಲಿನ ಆರೋಪಗಳಿಗೆ ಸಂಬಂಧಿಸಿದಂತೆ ಸೂಪರ್ವೈಸರ್ ಡಾಲಿ ಅವರ ಪಾತ್ರವೇನು ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.



