ನೆಲಮಂಗಲ: ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್ಗೆ ತೆರಳಿದ್ದ 31 ವರ್ಷದ ಪ್ರತೀಕ್ ಉಪಾಧ್ಯಾಯ ನಾಪತ್ತೆಯಾಗಿರುವ ಪ್ರಕರಣ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ. ನಿನ್ನೆ ಬೆಳಗ್ಗೆ ಬೆಟ್ಟಕ್ಕೆ ತೆರಳಿದ್ದ ಯುವಕ, ಪಾರ್ಕಿಂಗ್ನಲ್ಲಿ ಬುಲೆಟ್ ಬೈಕ್ ಬಿಟ್ಟು ಟ್ರೆಕ್ಕಿಂಗ್ ಆರಂಭಿಸಿದ್ದರು. ಆದರೆ ಬಳಿಕ ಅವರ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬೆಟ್ಟ ಏರುತ್ತಿದ್ದ ಪ್ರತೀಕ್ ಅವರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಅವರು ಬೆಟ್ಟ ಹತ್ತಿದ ಬಳಿಕ ಮತ್ತೆ ಕೆಳಗೆ ಬಂದಿರುವುದು ಕ್ಯಾಮೆರಾ ದೃಶ್ಯಗಳಲ್ಲಿ ಪತ್ತೆಯಾಗಿಲ್ಲ ಎನ್ನಲಾಗಿದೆ. ಹೀಗಾಗಿ ಅವರು ಯಾವ ಮಾರ್ಗದಲ್ಲಿ ತೆರಳಿದರು, ಬೆಟ್ಟದಿಂದ ವಾಪಸ್ ಬಂದರೇ ಅಥವಾ ಬೆಟ್ಟದ ಯಾವುದೇ ಅಪಾಯಕಾರಿ ಪ್ರದೇಶದಲ್ಲಿ ಸಿಲುಕಿದ್ದಾರೆಯೇ ಎಂಬ ಪ್ರಶ್ನೆಗಳು ಎದುರಾಗಿವೆ.
ಪ್ರತೀಕ್ ಐದು ದಿನಗಳ ಹಿಂದೆ ವೈಟ್ಫೀಲ್ಡ್ನಲ್ಲಿ ಬುಲೆಟ್ ಬೈಕ್ ಬಾಡಿಗೆಗೆ ಪಡೆದಿದ್ದರು. ಅದೇ ಬೈಕ್ ಶಿವಗಂಗೆ ಬೆಟ್ಟದ ಪಾರ್ಕಿಂಗ್ನಲ್ಲಿ ಪತ್ತೆಯಾಗಿದೆ. ಮತ್ತೊಂದೆಡೆ, ಅವರ ಮೊಬೈಲ್ ಫೋನ್ ಬೇರೆ ಸ್ಥಳದಲ್ಲಿ ಸ್ವಿಚ್ ಆಫ್ ಆಗಿರುವುದು ಪ್ರಕರಣದ ತನಿಖೆಗೆ ಮತ್ತೊಂದು ತಿರುವು ನೀಡಿದೆ.
ಯುವಕನ ಪತ್ತೆಗಾಗಿ ಪೊಲೀಸರು ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ಪ್ರದೇಶವನ್ನು ಕೇಂದ್ರೀಕರಿಸಿ ಶೋಧ ನಡೆಸುತ್ತಿದ್ದಾರೆ. ಡ್ರೋನ್ ಕ್ಯಾಮೆರಾ ಬಳಸಿ ಕಲ್ಲುಬಂಡೆಗಳು, ದಟ್ಟ ಮರಗಿಡಗಳು ಹಾಗೂ ಬೆಟ್ಟದ ಅಪಾಯಕಾರಿ ಪ್ರದೇಶಗಳ ಮೇಲೆ ನಿಗಾ ಇರಿಸಲಾಗಿದೆ.
ಸಮುದ್ರ ಮಟ್ಟದಿಂದ ಸುಮಾರು 4,800 ಅಡಿ ಎತ್ತರದಲ್ಲಿರುವ ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ಕಡಿದಾದ ಹಾಗೂ ಅಪಾಯಕಾರಿ ಪ್ರದೇಶವಾಗಿದೆ. ಹೀಗಾಗಿ ಪ್ರತೀಕ್ ಅವರು ಆ ಭಾಗದಲ್ಲಿ ತೆರಳಿರುವ ಸಾಧ್ಯತೆಯನ್ನೂ ಪೊಲೀಸರು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ. ಸಿಸಿಟಿವಿ ದೃಶ್ಯಗಳು, ಮೊಬೈಲ್ ಫೋನ್ನ ಕೊನೆಯ ಸ್ಥಳ ಹಾಗೂ ಬೆಟ್ಟದ ವಿವಿಧ ಪ್ರದೇಶಗಳ ಪರಿಶೀಲನೆಯ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ಪ್ರತೀಕ್ ಅವರ ಪತ್ತೆಗೆ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.



