ಕೊಲಂಬೊ: ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡ 290 ರನ್‌ಗಳಿಗೆ ಆಲೌಟ್ ಆಗಿದೆ. ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC) ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಭರ್ಜರಿ ಮುನ್ನಡೆ ಸಾಧಿಸಿದ್ದು, ಲಂಕಾ ತಂಡಕ್ಕೆ ಫಾಲೋಆನ್ ಹೇರಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡವು 9 ವಿಕೆಟ್‌ಗಳ ನಷ್ಟಕ್ಕೆ 503 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಭಾರತೀಯ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಕೇವಲ 35 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ಲಂಕಾ ಪಡೆ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಕಣಕ್ಕಿಳಿದ ಪಸಿಂದು ಸೂರ್ಯಬಂಡಾರ 80 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಬಳಿಕ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸೋನಾಲ್ ದಿನುಷಾ ಭರ್ಜರಿ ಶತಕ ಸಿಡಿಸಿ ಶ್ರೀಲಂಕಾ ತಂಡದ ಮೊತ್ತವನ್ನು 250 ರನ್‌ಗಳ ಗಡಿ ದಾಟಿಸಿದರು. 162 ಎಸೆತಗಳನ್ನು ಎದುರಿಸಿದ ದಿನುಷಾ 103 ರನ್‌ಗಳ ಮಹತ್ವದ ಇನಿಂಗ್ಸ್ ಆಡಿದರು.
ಆದರೆ ದಿನುಷಾ ವಿಕೆಟ್ ಪತನದ ಬಳಿಕ ಭಾರತೀಯ ಬೌಲರ್‌ಗಳು ಮತ್ತೆ ಬಿಗಿ ದಾಳಿ ಸಂಘಟಿಸಿದರು. ಸತತವಾಗಿ ವಿಕೆಟ್‌ಗಳನ್ನು ಕಬಳಿಸಿದ ಟೀಂ ಇಂಡಿಯಾ ಬೌಲರ್‌ಗಳು ಶ್ರೀಲಂಕಾ ತಂಡವನ್ನು 290 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.
ಭಾರತದ ಪರ ಪ್ರಸಿದ್ಧ್ ಕೃಷ್ಣ ಹಾಗೂ ಮಾನವ್ ಸುತಾರ್ ತಲಾ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಸರಾನ್ಶ್ ಜೈನ್ ಎರಡು ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
ಲಂಕಾಗೆ ಫಾಲೋಆನ್
ಮೊದಲ ಇನಿಂಗ್ಸ್‌ನಲ್ಲಿ 213 ರನ್‌ಗಳ ಭರ್ಜರಿ ಮುನ್ನಡೆ ಪಡೆದ ಟೀಂ ಇಂಡಿಯಾ, ಶ್ರೀಲಂಕಾ ತಂಡಕ್ಕೆ ಫಾಲೋಆನ್ ಹೇರಿದೆ. ಇದರೊಂದಿಗೆ ಲಂಕಾ ಪಡೆ ಇದೀಗ ಎರಡನೇ ಇನಿಂಗ್ಸ್ ಆರಂಭಿಸಿದೆ.
ಶ್ರೀಲಂಕಾ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ 213 ರನ್‌ಗಳ ಒಳಗಾಗಿ ಆಲೌಟ್ ಮಾಡಲು ಭಾರತ ಯಶಸ್ವಿಯಾದರೆ, ಟೀಂ ಇಂಡಿಯಾ ಇನಿಂಗ್ಸ್ ಹಾಗೂ ರನ್‌ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಲಿದೆ. ಹೀಗಾಗಿ ಕೊಲಂಬೊ ಟೆಸ್ಟ್‌ನಲ್ಲಿ ಭಾರತ ಇನಿಂಗ್ಸ್ ಗೆಲುವಿನತ್ತ ಮುನ್ನಡೆಯುತ್ತಿದೆ.
ಭಾರತ ಪ್ಲೇಯಿಂಗ್ XI:
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್‌ಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಸರಾನ್ಶ್ ಜೈನ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಶ್ರೀಲಂಕಾ ಪ್ಲೇಯಿಂಗ್ XI:
ಲಹಿರು ಉದಾರ, ಕಮಿಲ್ ಮಿಶ್ರಾ, ಪಸಿಂದು ಸೂರ್ಯಬಂಡಾರ, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಷಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಕೇಶರ ನುವಾಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೊ.



