ಬೆಳಗಾವಿ: ಕಬ್ಬು ಬೆಳೆಗಾರರಿಗೆ ಹೆಚ್ಚುವರಿಯಾಗಿ ಪ್ರತಿ ಟನ್ 100 ರೂ. ಕೊಡಲು ಸರ್ಕಾರ ತೀರ್ಮಾನಿಸಲಾಗಿದೆ. ಆದ್ರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ಕಬ್ಬಿನ ಬೆಂಬಲ ದರದ ಬೇಡಿಕೆಗೆ ರೈತರು ನಿನ್ನೆ ಪ್ರತಿಭಟನೆ ನಡೆಸಿದರು. ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡು, ಪೊಲೀಸರತ್ತ ರೈತರು ಕಲ್ಲು ತೂರಿದ್ದರು. ಈ ಸಂಬಂಧ ಇಂದು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.
ಕಲ್ಲು ತೂರಿದ 11 ಮಂದಿ ವಿರುದ್ಧ ಪಿಎಸ್‌ಐ ಆರ್.ವಿ ಪಾಟೀಲ್ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ. ಪ್ರತಿಭಟನೆ ವೇಳೆ ಪೊಲೀಸರನ್ನ ಕೊಲೆ ಮಾಡುವ ಉದ್ದೇಶದಿಂದ ಕಲ್ಲು ತೂರಾಟ ಮಾಡಿ, ಪೊಲೀಸರನ್ನ ಒದ್ದು ಹಲ್ಲೆ ಮಾಡಿ ತೀವ್ರ ಗಾಯ ಗೊಳಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಡಿಜಿಪಿ ಹಿತೇಂದ್ರ ಆರ್ ಪರಿಶೀಲನೆ ನಡೆಸಿದ್ರು. ಯಮಕನಮರಡಿ ಠಾಣೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಿಸಿಟಿವಿ ಪರಿಶೀಲನೆ ನಡೆಸಿ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ರು.



