ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಶಾಲಾ–ಕಾಲೇಜುಗಳಲ್ಲಿ ಅಯ್ಯಪ್ಪ ಮಾಲೆ ಧರಿಸಿ ಬರುವ ವಿದ್ಯಾರ್ಥಿಗಳ ವಿಚಾರವಾಗಿ ವಿವಾದಗಳು ಹೆಚ್ಚಾಗುತ್ತಿವೆ.
ಈ ನಡುವೆ ಚಿಕ್ಕಮಗಳೂರಿನಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ನಗರದ ಖಾಸಗಿ ಶಾಲೆಯೊಂದರಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದ ವಿದ್ಯಾರ್ಥಿಯ ಮೇಲೆ ಶಿಕ್ಷಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಗರದ ಸಂತ ಜೋಸೆಫ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಹಾಜರಾದ ವಿದ್ಯಾರ್ಥಿಯನ್ನು ಶಿಕ್ಷಕರು ಹೊಡೆದು, ಶಾಲೆಯಿಂದ ಹೊರ ಕಳುಹಿಸಿದ್ದಾರೆ ಎಂದು ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆಗೆ ಆಕ್ರೋಶಗೊಂಡ ಭಜರಂಗದಳ ಕಾರ್ಯಕರ್ತರು ಹಾಗೂ ನೂರಾರು ಅಯ್ಯಪ್ಪ ಮಾಲಾಧಾರಿಗಳು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಸಂದರ್ಭ ಶಾಲಾ ಆಡಳಿತ ಮಂಡಳಿ ಅಯ್ಯಪ್ಪ ಮಾಲಾಧಾರಿಗಳ ಬಳಿ ಕ್ಷಮೆ ಯಾಚಿಸಿದೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದಕ್ಕೂ ಮೊದಲು ಡಿಸೆಂಬರ್ 1ರಂದು ಚಿಕ್ಕಮಗಳೂರಿನ MES ಪಿಯು ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ತರಗತಿಗೆ ಬಂದಿದ್ದಕ್ಕೆ ಪ್ರಿನ್ಸಿಪಾಲ್ ಆಕ್ಷೇಪ ವ್ಯಕ್ತಪಡಿಸಿ, ಮಾಲೆ ತೆಗೆದು ಬರುವಂತೆ ಸೂಚಿಸಿ ಹೊರ ಕಳುಹಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸೇರಿದಂತೆ ಹಲವಾರು ಹಿಂದೂ ಸಂಘಟನೆಗಳ ಮುಖಂಡರು ಕಾಲೇಜು ಬಳಿ ಪ್ರತಿಭಟನೆ ನಡೆಸಿ, ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಅಯ್ಯಪ್ಪ ಮಾಲಾಧಾರಿಗಳನ್ನು ತಡೆಯಲು ಯತ್ನಿಸಿದರೆ ನೂರಾರು ವಿದ್ಯಾರ್ಥಿಗಳಿಗೆ ಮಾಲೆ ಹಾಕಿಸುವ ಎಚ್ಚರಿಕೆಯನ್ನೂ ಅವರು ನೀಡಿದ್ದರು. ಇದಷ್ಟೇ ಅಲ್ಲದೆ, ಬುಧವಾರ (ಡಿ.17) ಅಯ್ಯಪ್ಪ ಮಾಲೆ ಧರಿಸಿದ್ದ ಕಾರಣ ಆರನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಶಾಲೆಯಿಂದ ವಾಪಸ್ ಕಳುಹಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ ಈ ಆರೋಪಗಳನ್ನು ತಳ್ಳಿ ಹಾಕಿದ್ದ ಪ್ರಭಾರಿ ಮುಖ್ಯ ಶಿಕ್ಷಕಿ ಭಾಗ್ಯ, ಯಾವುದೇ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಗೆ ಕಳುಹಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಮತ್ತೆ ಅಯ್ಯಪ್ಪ ಮಾಲೆ ಧರಿಸಿದ ಮಕ್ಕಳ ಮೇಲೆ ಶಿಕ್ಷಕರು ಹಲ್ಲೆ ನಡೆಸಿದ್ದಾರೆಂಬ ಆರೋಪ ಚಿಕ್ಕಮಗಳೂರಿನಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.



